ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಕೈ' ಪಡೆಯೇ ಪಾರುಪತ್ಯ

Rashmi Kasaragodu
Updated On : 28 Mar 2014, 2:07 am

ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ   ತುಮಕೂರು   ಮಾ.27
1952 ರಿಂದ ಈವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೈ ಪಡೆ ಪಾರುಪತ್ಯ ಮೆರೆದಿದೆ. ಈವರೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 9 ಸಲ ಗೆದ್ದಿದೆ. ಬಿಜೆಪಿ ನಾಲ್ಕು ಸಲ ಗೆದ್ದರೆ ಜೆಡಿಎಸ್, ಪಿಎಸ್ಪಿ, ಎನ್ಸಿಜೆ ತಲಾ ಒಂದು ಬಾರಿ ಜಯ ದಾಖಲಿಸಿದೆ.
ಕಾಂಗ್ರೆಸ್ 1952, 1957,  1962, ಮತ್ತೆ 1962 ರ ಉಪಚುನಾವಣೆ, 1977, 1980, 1984, 1989 ಮತ್ತು  1999 ರಲ್ಲಿ ಜಯಗಳಿಸಿ ದಾಖಲೆಯ 9 ಬಾರಿ ಗೆದ್ದಿದೆ.
1952 ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸಿ.ಆರ್.  ಬಸಪ್ಪ ಅವರು ಖಾದ್ರಿ ಶಾಮಣ್ಣ ವಿರುದ್ಧ ಜಯಗಳಸಿದರು. ಬಸಪ್ಪ ಅವರು 1 ಲಕ್ಷ 16 ಸಾವಿರದ 596 ಮತ ಪಡೆದರೆ ಖಾದ್ರಿ ಶಾಮಣ್ಣ ಅವರು 47,556 ಮತ ಪಡೆದರು.
1957 ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಂ.ವಿ. ಕೃಷ್ಣಪ್ಪ 1 ಲಕ್ಷ 16 ಸಾವಿರದ 853 ಮತಗಳನ್ನು ಪಡೆದು ಬಿ.ಪಿ. ಗಂಗಾಧರಯ್ಯ ವಿರುದ್ಧ ಗೆಲುವು ದಾಖಲಿಸಿದ್ದರು. 1962 ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ವಿ. ಕೃಷ್ಣಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಅವರು 1 ಲಕ್ಷ 19 ಸಾವಿರದ 617 ಮತ ಪಡೆದು ಶಂಕರಲಿಂಗಪ್ಪ ವಿರುದ್ಧ ಜಯಗಳಿಸಿದ್ದರು.
ಆದರೆ ಅದೇ ವರ್ಷ ಇವರ ರಾಜಿನಾಮೆಯಿಂದ ತೆರವಾಗಿದ್ದ ಜಾಗಕ್ಕೆ ಉತ್ತರ ಪ್ರದೇಶದ ಅಜಿತ ಪ್ರಸಾದ್ ಜೈನ್ ಬಂದು ಸ್ಪರ್ಧಿಸಿದ್ದರು. ಅವರು 83,150 ಮತ ಪಡೆದು ಪಿಎಸ್ಪಿಯಿಂದ ಸ್ಪರ್ಧಿಸಿದ್ದ ಎಂ. ಬುಡ್ಡಾದಾಸ್ ಅವರನ್ನು ಪರಾಭವಗೊಳಿಸಿದ್ದರು.
1977,80 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು ಕ್ರಮವಾಗಿ ಬಿ.ಎಲ್.ಡಿ ಮತ್ತು ಜೆಎನ್ಪಿ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ಮಲ್ಲಿಕಾರ್ಜುನಯ್ಯ ವಿರುದ್ಧ ಜಯಸಾಧಿಸಿದ್ದರು. 1977 ರಲ್ಲಿ ಲಕ್ಕಪ್ಪ ಅವರು 2 ಲಕ್ಷ37 ಸಾವಿರದ 86 ಮತ ಪಡೆದು ಲೋಕಸಭೆ ಪ್ರವೇಶಿಸಿದರು. ಹಾಗೆಯೇ 1980 ರಲ್ಲಿ ನಡೆದ ಚುನಾವಣೆಯಲ್ಲಿ 2 ಲಕ್ಷ 43 ಸಾವಿರದ 229 ಮತ ಪಡೆದು ಆಯ್ಕೆಯಾಗಿದ್ದರು.
1984 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು ಆಯ್ಕೆಯಾಗಿದ್ದರು. ಅಂದು ಅವರು 2 ಲಕ್ಷ 65 ಸಾವಿರದ 249 ಮತ ಪಡೆದು ಆಯ್ಕೆಯಾಗಿದ್ದರು. ಹಾಗೆಯೇ 1989 ರಲ್ಲಿ ನಡೆದ ಚುನಾವಣೆಯಲ್ಲೂ ಜಿ.ಎಸ್. ಬಸವರಾಜು 2 ಲಕ್ಷ 76 ಸಾವಿರದ 878 ಮತ ಪಡೆದು ಲೋಕಸಭೆಗೆ ಆಯ್ಕೆಯಾದರು.
ಮತ್ತೆ 1999 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಬಸವರಾಜು ಅವರು 3ಲಕ್ಷ 18 ಸಾವಿರದ 922 ಮತ ಪಡೆದು ಆಯ್ಕೆಯಾದರು. ಉಳಿದಂತೆ ಬಿಜೆಪಿ 1991 ರಲ್ಲಿ ನಡೆದ ಚುನಾವಣೆಯಲ್ಲಿ ಎಸ್. ಮಲ್ಲಿಕಾರ್ಜುನಯ್ಯ ಅವರು 2 ಲಕ್ಷ 55 ಸಾವಿರದ 186 ಮತ ಪಡೆದು ಆಯ್ಕೆಯಾದರು. 1998 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನಯ್ಯ 2 ಲಕ್ಷ 27 ಸಾವಿರದ 312 ಮತ ಪಡೆದು ಆಯ್ಕೆಯಾದರು. ಹಾಗೆಯೇ 2004 ರಲ್ಲಿ ಮತ್ತೆ ಮಲ್ಲಿಕಾರ್ಜುನಯ್ಯ 3 ಲಕ್ಷ 3 ಸಾವಿರದ16 ಮತ ಪಡೆದು ಜೆಡಿಎಸ್ನ ಜಗದೀಶ್ ವಿರುದ್ಧ ಗೆಲುವು ಸಾಧಿಸಿದ್ದರು.
2009 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್. ಬಸವರಾಜು 3 ಲಕ್ಷ 31 ಸಾವಿರದ 64 ಮತ ಪಡೆದು ಬಿಜೆಪಿ ನಾಲ್ಕನೇ ಬಾರಿ ಗೆಲುವಿಗೆ ಕಾರಣರಾದರು. ಉಳಿದಂತೆ 1996 ರಲ್ಲಿ ಜನತಾದಳದಿಂದ ಸಿ.ಎನ್. ಭಾಸ್ಕರಪ್ಪ ಆಯ್ಕೆಯಾದರೆ, 1967 ರಲ್ಲಿ ಕೆ. ಲಕ್ಕಪ್ಪ ಪ್ರಜಾಸೋಷಿಯಲಿಸ್ಟ್ ಪಕ್ಷದಿಂದ ಮತ್ತು 1971 ರಲ್ಲಿ ಇದೇ ಲಕ್ಕಪ್ಪ ಎನ್ಸಿಜೆ ಪಕ್ಷದಿಂದ ಲೋಕಸಭೆ ಪ್ರವೇಶಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement