ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನ್ಯಾಯಾಂಗ ವ್ಯವಸ್ಥೆಯ ಚಿತ್ರಪಟ ಪ್ರದರ್ಶನ

Rashmi Kasaragodu
Updated On : 28 Mar 2014, 2:18 am

ಹಲಗೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಭಾರತ ನ್ಯಾಯಾಂಗ ವ್ಯವಸ್ಥೆಯ ಚಿತ್ರಪಟ ಪ್ರದರ್ಶನ ಮತ್ತು ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ  ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಹೇಮಾಂತ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಹಕ್ಕುಗಳಿಗಾಗಿ ಹೋರಾಟ ಮಾಡಿದೆ ಎಂದ ಅವರು ಸಂವಿಧಾನದ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.  ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ರಶ್ಮಿ ಮಾತನಾಡಿ, ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯ ವಿಳಂಬ ವಾಗದಂತೆ ಮಾಡಲು ನ್ಯಾಯಾಲಯಗಳ ಹಾಗೂ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಬೇಕು. ಆಗ ನ್ಯಾಯ ಅತೀ ಶೀಘ್ರವಾಗಿ ಎಲ್ಲರಿಗೂ ಸಿಗುತ್ತದೆ ಎಂದರು.


ಗಂಜಾಂ ಗ್ರಾಮದಲ್ಲಿ ವಿಶ್ವಜಲ ದಿನಾಚರಣೆ
ಶ್ರೀರಂಗಪಟ್ಟಣ: ತಾಲೂಕಿನ ಗಂಜಾಂ ಗ್ರಾಮದಲ್ಲಿ ವಿಶ್ವ ಜಲದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಆರ್ಸಿಎಡೆಡ್ ಶಾಲೆ ಸಭಾಂಗಣದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ ಸಹಯೋಗದಲ್ಲಿ ಶಾಲಾ ಮಕ್ಕಳಿಂದ ಶುದ್ಧ ನೀರಿನ ಕಳಸವನ್ನು ತಲೆ ಮೇಲೆ ಹೊತ್ತು ತರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸಂಜೋಜಕ ಓಡಿಪಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಜಾನ್ ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.  ನಮ್ಮ ಸುತ್ತಲೂ ಉತ್ತಮ ಪರಿಸರ ಇದ್ದರೆ ನಮಗೆ ಮಳೆಯಾಗಿ ನೀರು ಬೆಳೆ ಆಹಾರ ದೊರೆಯುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ನಿಸರ್ಗ ಸೇರಿದಂತೆ ಶಿವಣ್ಣ, ಸ್ಟೆಲ್ಲಾ ಮೇರಿ, ಭಾಗ್ಯಶಂಕರ್ ಉಪಸ್ಥಿತರಿದ್ದರು.



ರಾಜಕೀಯ ಪಕ್ಷಗಳಿಂದ ನೈಸರ್ಗಿಕ ಸಂಪತ್ತು ಲೂಟಿ


ಮದ್ದೂರು: ಕಾರ್ಪೋರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವ ರಾಜಕೀಯ ಪಕ್ಷಗಳು ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ ಹೇಳಿದರು.
ಪಟ್ಟಣದ ಲೀಲಾವತಿ ಬಡಾವಣೆಯ ವಿನಾಯಕ ಕಲ್ಯಾಣ ಮಂಟಪದಲ್ಲಿ ಸಿಐಟಿಯು ಆಯೋಜಿಸಿದ್ದ ದುಡಿಯುವ ಜನರು ಮತ್ತು ಸಂಸತ್ ಚುನಾವಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿದೇಶಿ ಕಾರ್ಪೋರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದೇಶದ ನೈಸರ್ಗಿಕ ಸಂಪತ್ತನ್ನು ಹಾಳು ಮಾಡುತ್ತಿವೆ. ಇದರಿಂದ ಜನರ ಜೀವ ಸೆಲೆಯಾದ ನದಿಗಳ ನೀರನ್ನು ವಿದೇಶಿ ಕಂಪನಿಗಳು ಬಾಟ್ಲಿಂಗ್ ವ್ಯವಸ್ಥೆ ಮೂಲಕ ದೇಶ ವಿದೇಶಗಳಲ್ಲಿ ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದರು. ನೈಸರ್ಗಿಕ ಸಂಪತ್ತಿನ ಲೂಟಿಯಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಆಹಾರ ಮತ್ತು ನೀರಿನ ಕೊರತೆ ಎದುರಾಗಲಿದೆ. ಸಾರ್ವಜನಿಕರು ದೇಶವನ್ನು ಇಂತಹ ಅಧೋಗತಿಗೆ ತರುತ್ತಿರುವ ರಾಜಕೀಯ ಪಕ್ಷಗಳನ್ನು ಚುನಾವಣೆಗಳಲ್ಲಿ ಸಾರಾಸಗಟಾಗಿ ತಿರಸ್ಕರಿಸುವಂತೆ ಸಲಹೆ ಮಾಡಿದರು.
ಕಾರ್ಮಿಕ ಪರ ನೀತಿ ಇಲ್ಲ:   ದೇಶದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕಾರ್ಮಿಕರ ಪರವಾದ ನೀತಿಗಳನ್ನು ರೂಪಿಸುವಲ್ಲಿ ವಿಫಲವಾಗಿವೆ. ಕಾರ್ಮಿಕ ವರ್ಗ ಚುನಾವಣೆಯಲ್ಲಿ ಹಣಕ್ಕಾಗಿ ತಮ್ಮ ಮತಗಳನ್ನು ಮಾರಿಕೊಳ್ಳದೆ ಕಡ್ಡಾಯ ಮತದಾನದ ಮೂಲಕ ಕಾರ್ಮಿಕ ನೀತಿಗಳ ಬಗ್ಗೆ ಒಲವು ಹೊಂದಿರುವ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತನಾಡಿ, ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತನೆ ಮಾಡುತ್ತಿರುವ ರಾಜಕಾರಣಿಗಳು ಸ್ವಾವಲಂಬಿ ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುತ್ತಿರುವ ಹುನ್ನಾರದ ವಿರುದ್ಧ ದ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ತನುಜಾ ಅಧ್ಯಕ್ಷತೆ ವಹಿಸಿದ್ದರು. ಎ.ರಮೇಶ್, ಟಿ.ಯಶವಂತ್, ಸಿ.ಪ್ರದೀಪ್ ಇತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement