ಎಲ್ಲ ಮತದಾನಕ್ಕೂ ಮೊದಲ ಶ್ರೀಕಾರ
ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ತುಮಕೂರು ಮಾ.28
107 ನೇ ವರ್ಷಕ್ಕೆ ಕಾಲಿಡುತ್ತಿರುವ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಈವರೆಗೆ ನಡೆದ ಎಲ್ಲಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1952 ರಿಂದ ಈವರೆಗೆ ನಡೆದ ಎಲ್ಲಾ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಶ್ರೀಗಳು ಮತ ಚಲಾಯಿಸಿದ್ದಾರೆ. ಮತ್ತೂ ವಿಷೇಷವೆಂದರೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ಥಾಪಿಸಿರುವ ಮತಗಟ್ಟೆಗೆ ಬೆಳಿಗ್ಗೆ ಮೊದಲು ಮತದಾನ ಮಾಡುವುದು ಶ್ರೀಗಳೇ.
ಸಿ.ಆರ್. ಬಸಪ್ಪ ಮತ್ತು ಖಾದ್ರಿ ಶಾಮಣ್ಣ ಅವರು 1952 ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೊದಲ ಚುನಾವಣೆಯಿಂದ ಹಿಡಿದು ಒಂದು ಉಪಚುನಾವಣೆ ಸೇರಿದಂತೆ ಇಲ್ಲಿಯವರೆಗೆ 15 ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಶ್ರೀಗಳು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ. ಮತದಾನದ ದಿನದಂದು ಶ್ರೀಗಳು ಎಂದಿನಂತೆ ಸ್ನಾನ, ಪೂಜೆ ಇತ್ಯಾದಿ ಮುಗಿಸಿ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಕೊಂಡು ಬಳಿಕ ಸಿದ್ಧಗಂಗಾ ಮಠದ ಆವರಣದಲ್ಲಿ ಸ್ಥಾಪಿಸಿರುವ ಮತಗಟ್ಟೆಯ ಕೇಂದ್ರಕ್ಕೆ ಮೊದಲನೆಯವರಾಗಿ ಹೋಗಿ ಮತ ಚಲಾಯಿಸುತ್ತಾರೆ.
ಶ್ರೀಮಠಕ್ಕೆ ಪ್ರಮುಖರು: ರಾಜಕೀಯ ಘಟನಾವಳಿಗಳು ಸೇರಿದಂತೆ ತುಮಕೂರಿನ ಮಟ್ಟಿಗೆ ಇತಿಹಾಸದಲ್ಲಿ ನಡೆದು ಹೋಗಿರುವ ಎಲ್ಲಾ ಘಟನೆಗಳಿಗೂ ಇವರಿಗೆ ತಿಳಿದಿದೆ. ಅಲ್ಲದೇ ಶ್ರೀ ಮಠಕ್ಕೆ ಈವರೆಗೆ ದೇಶದ ಪ್ರಮುಖ ರಾಜಕಾರಣಿಗಳೆಲ್ಲಾ ಬಂದು ಹೋಗಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ, ಶಂಕರದಯಾಳ ಶರ್ಮ, ಪ್ರತಿಭಾ ಪಾಟೀಲ್ ಹಾಗೂ ರಾಜ್ಯದ ಎಲ್ಲಾ ರಾಜಕಾರಣಿಗಳು ಶ್ರೀ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದು ಹೋಗಿದ್ದಾರೆ.
ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಯಲ್ಲೂ ಮತದಾನ ಮಾಡಿದ್ದೇನೆ. ಮತ ಹಾಕುವುದು ನಮ್ಮೆಲ್ಲರ ಹಕ್ಕು. ಹಿಂದೆ ನಡೆಯುತ್ತಿದ್ದ ಚುನಾವಣಾ ಪ್ರಚಾರಕ್ಕೂ ಈಗಿನದಕ್ಕೂ ಸಾಕಷ್ಟು
ಬದಲಾವಣೆ ಆಗಿದೆ.
ಡಾ. ಶಿವಕುಮಾರ ಸ್ವಾಮೀಜಿ