ಕೊಬ್ಬರಿಗೆ ರು. 9000 ಬಂಪರ್ ಬೆಲೆ
ಹುಳಿಯಾರು: ಕೇವಲ ನಾಲ್ಕೈದು ಸಾವಿರ ರು.ಗಳ ಅಸುಪಾಸಿನಲ್ಲಿ ಇರುತ್ತಿದ್ದ ಕೊಬ್ಬರಿ ಬೆಲೆ ಇಲ್ಲಿನ ಎಪಿಎಂಸಿಯಲ್ಲಿ ಗುರುವಾರ ಸಂಜೆ ರು.9000 ಆಗುವ ಮೂಲಕ ದಾಖಲೆ ಬೆಲೆ ನಿರ್ಮಿಸಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕೊಬ್ಬರಿ ಬೆಲೆ ತೀವ್ರ ಕುಸಿದು ಗರಿಷ್ಠ ಬೆಲೆ ರು.5500 ಮೀರಿರಲಿಲ್ಲ.
ಇತ್ತೀಚೆಗಷ್ಟೆ ಸರ್ಕಾರದ ಇ-ಟೆಂಡರ್ ಪ್ರಾರಂಭವಾಗಿ ಕೊಬ್ಬರಿ ಬೆಲೆ ತಿಪಟೂರು ಮಾರುಕಟ್ಟೆಯಲ್ಲಿ ಏರಿಕೆ ಕಂಡಿತ್ತು, ಇ-ಟೆಂಡರ್ ಪ್ರಕ್ರಿಯೆಯಿಂದ ರೈತರಿಗೆ ದರ ಏರಿಕೆ ಮೂಲಕ ಅನುಕೂಲಕರವಾಗಿದ್ದು, ವರ್ತಕರು ಮಾತ್ರ ಇದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನು ಬೆಂಬಲಿಸಿ ಹುಳಿಯಾರಿನ ಎಪಿಎಂಸಿ ವರ್ತಕರು ಸಹ
ಇ-ಟೆಂಡರ್ಗೆ ವಿರೋಧ ವ್ಯಕ್ತಪಡಿಸಿ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿದ್ದರು.
ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿದ ನಂತರ ಕಳೆದ ವಾರದಿಂದ ವಹಿವಾಟು ಆರಂಭಗೊಂಡಿತ್ತು.
ಇದರಿಂದಾಗಿ ಕೊಬ್ಬರಿ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಗುರುವಾರದಂದು ನಡೆದ ಟೆಂಡರ್ನಲ್ಲಿ ವರ್ತಕರು ಗರಿಷ್ಠ ಬೆಲೆ ರು.9000 ಕೊಂಡಿದ್ದು,
ಇದು ಹುಳಿಯಾರು ಮಾರುಕಟ್ಟೆಯ ಸಾರ್ವಕಾಲಿಕ ದಾಖಲೆ ಬೆಲೆ ಎನ್ನಲಾಗಿದೆ. ಇತ್ತೀಚಿನ ತೀವ್ರ ಬರಗಾಲದಿಂದ ಈ ಭಾಗದಲ್ಲಿ ತೆಂಗು ನೆಲಕಚ್ಚಿದ್ದು, ಇಳುವರಿ ಕುಂಠಿತಗೊಂಡಿದೆ. ಮಾರುಕಟ್ಟೆಗೆ ಬರುವ ಕೊಬ್ಬರಿ ಅವಕ ಕಡಿಮೆಯಾಗಿರುವುದರಿಂದ ಬೆಲೆಯ ಪ್ರಮಾಣದಲ್ಲಿ ಏರಿಕೆಯುಂಟಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.