ದಿಕ್ಕುತಪ್ಪುತ್ತಿರುವ ಚಳವಳಿ ಬಗ್ಗೆ ಎಚ್ಚರವಿರಲಿ
ದೊಡ್ಡಬಳ್ಳಾಪುರ: ದಿಕ್ಕುತಪ್ಪುತ್ತಿರುವ ಚಳವಳಿಗಳ ಬಗ್ಗೆ ಎಚ್ಚರವಿರಬೇಕು. ಒಂದು ಕಾಲಕ್ಕೆ ಅತ್ಯಂತ ಪ್ರಬಲ ಮತ್ತು ಜೀವಂತವಾಗಿದ್ದ ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳು ಇಂದು ಸ್ವಾರ್ಥ ಮತ್ತು ಪ್ರತಿಷ್ಠೆಗಳಿಂದ ದಿಕ್ಕು ತಪ್ಪುತ್ತಿವೆ ಎಂದು ಹಲವು ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟರು.
ಇಲ್ಲಿನ ಪುರಭವನದಲ್ಲಿ ನಡೆದ ಕನ್ನಡ ಚಳವಳಿ ನಾಯಕ, ಮಾಜಿ ಶಾಸಕ ಕೆ.ಪ್ರಭಾಕರರೆಡ್ಡಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಳವಳಿ ಸಮಾಜದ ಬದಲಾವಣೆಗೆ ಕಾರಣವಾಗುವ ಕಾಲಘಟ್ಟದಿಂದ ನಾವು ಬಹುದೂರ ಬಂದಿದ್ದೇವೆ. ಆದರೆ ಹೋರಾಟಗಳು ದಿಕ್ಕುತಪ್ಪುತ್ತಿರುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ದೊಡ್ಡ ಹೊಡೆತ. ಈ ಹಂತದಲ್ಲಿ ಬೆಂಗಳೂರು ಮೂಲದಲ್ಲಿ ಹುಟ್ಟಿ ಬೆಳೆದ ಕನ್ನಡ ಚಳವಳಿ ನಮಗೆ ಮಾದರಿಯಾಗಬೇಕು. ಪ್ರಭಾಕರರೆಡ್ಡಿ ಅಂತಹ ಹೋರಾಟಗಾರರು ಯುವ ಹೋರಾಟಗಾರರಿಗೆ ಸ್ಫೂರ್ತಿಯಾಗಬೇಕು, ಕನ್ನಡದ ಮೂಲಕವೇ ಶಾಸನ ಸಭೆ ಪ್ರವೇಶಿಸಿದ ಹೆಗ್ಗಳಿಗೆ ಹೊಂದಿರುವ ರತ್ನತ್ರಯರಲ್ಲಿ ವಾಟಾಳ್ ನಾಗರಾಜ್, ಜಿ. ನಾರಾಯಣಕುಮಾರ್ ಮತ್ತು ಕೆ.ಪ್ರಭಾಕರ ರೆಡ್ಡಿ ಸೇರಿದ್ದಾರೆ ಎಂದರು.
ಅಪ್ಪಟ ಕನನಡ ಪ್ರೇಮ: ಪ್ರಭಾಕರರೆಡ್ಡಿ ಅವರದು ಅಪ್ಪಟ ಕನ್ನಡ ಪ್ರೇಮ. ಬೆಂಗಳೂರಿನಂತಹ ನಗರದಲ್ಲಿ ತಮ್ಮದೇ ಆದ ಘನತೆಯನ್ನು ಹೊಂದಿ ಕನ್ನಡತನವನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಮೂಲಕ ಶಾಸನಸಭೆ ಪ್ರವೇಶಿಸಿ ಗಣನೀಯವಾಗಿ ಗುರುತಿಸಿಕೊಂಡ ಅವರು ಅನೇಕ ಹೋರಾಟಗಳನ್ನು ಮುನ್ನಡೆಸಿದವರು.
ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಸ್ಥಳೀಯರಿಗೆ ಉದ್ಯೋಗ ವಿಚಾರದ ಮಹತ್ವದ ಹೋರಾಟಗಳಲ್ಲಿ ಸ್ಥಳೀಯ ಹೋರಾಟಗಾರರ ಜೊತೆ ಜೊತೆಯಲ್ಲಿ ಮುಂದಾಳತ್ವ ವಹಿಸಿದವರು.
ದೊಡ್ಡಬಳ್ಳಾಪುರದ ಹಲವು ಕನ್ನಡಪರ ಚಳವಳಿಗಳಲ್ಲೂ ಅವರು ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಅನೇಕ ಬಾರಿ ದೊಡ್ಡಬಳ್ಳಾಪುರದಲ್ಲಿ ಹೋರಾಟಗಳ ಮೂಲಕ ಯುವ ಚಳವಳಿಗಾರರಿಗೆ ಮಾರ್ಗದರ್ಶನ ನೀಡಿದವರು ಎಂದು ಹಲವು ಗಣ್ಯರು ಸ್ಮರಿಸಿದರು.
ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ. ಆಂಜನೇಯ, ರೈತ ಸಂಘದ ಸುಲೋಚನಮ್ಮ ವೆಂಕಟರೆಡ್ಡಿ, ಕಸಾಪ ಗೌ.ಅಧ್ಯಕ್ಷ ಕೆ.ಆರ್.ರವಿಕಿರಣ್, ಅಧ್ಯಕ್ಷ ಶ್ರೀಕಾಂತ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ನ.ಮಹದೇವ್, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್, ನಗರಸಭಾ ಉಪಾಧ್ಯಕ್ಷೆ ಮಂಜುಳಾ, ಪತ್ರಕರ್ತ ರಾಜೇಂದ್ರಕುಮಾರ್, ರಾಶಿರಾಪು ಬಳಗದ ಡಿ.ಎನ್. ತಿಮ್ಮರಾಜು ಮತ್ತಿತರರು ಮಾತನಾಡಿದರು.
ಹಲವು ಸಂಘಟನೆಗಳ ಮುಖಂಡರು ಹಾಜರಿದ್ದರು.