ಪರೀಕ್ಷೆಗೆ ಭದ್ರತೆ
ಪಾವಗಡ: ತಾಲೂಕಿನ 15 ಪರೀಕ್ಷೆ ಕೇಂದ್ರಗಳಲ್ಲಿ 3509 ಮಂದಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕನ್ನಡ ವಿಷಯದ ಪರೀಕ್ಷೆಯನ್ನು ಬರೆದಿದ್ದಾರೆ. ಶುಕ್ರವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು ತಾ.15 ಪರೀಕ್ಷೆ ಕೇಂದ್ರಗಳಲ್ಲಿ 3509 ವಿದ್ಯಾರ್ಥಿಗಳು ಕನ್ನಡ ವಿಷಯದ ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಸೇರಿದಂತೆ ಪರೀಕ್ಷೆ ಕೇಂದ್ರಗಳ ಬಳಿ ಸಾರ್ವಜನಿಕ ಪ್ರವೇಶ ನಿಷೇಧಿಸಲು ಮುಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿದೆ. ತಾಲೂಕಿನ ಯಾವುದೇ ಕೇಂದ್ರದಲ್ಲಿ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲವೆಂದು ಕ್ಷೇತ್ರಾಶಿಕ್ಷಣಾಧಿಕಾರಿ ಬಿ.ಪಿ.ನಾಗರಾಜ್ ತಿಳಿಸಿದ್ದಾರೆ.
ತಪಾಸಣಾ ಶಿಬಿರ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜಾನುವಾರು ಆರೋಗ್ಯ ಮತ್ತು ರಾಸುಗಳ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಡಾ. ಕೆ.ವಿ.ಮಿಥುನ್, ಡಾ. ಎಂ.ಪಿ. ಶಶಿಧರ್, ಡಾ.ಕೆ.ಜಿ. ಸಿದ್ದಲಿಂಗಪ್ಪ, ಸಹಾಯಕ ನಿರ್ದೇಶಕ ಡಾ. ಮಹೇಶ್ ಸೇರಿದಂತೆ ಇಲಾಖೆ ಸಿಬ್ಬಂದಿ ವರ್ಗದವರಿದ್ದರು.
ಸಮಾರಂಭ
ತಿಪಟೂರು: ಪಟ್ಟಣದ ಕಲ್ಪತರು ಮಾಂಟೆಸ್ಸೋರಿಯಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ಇಂದ್ರ ಧನುಷ್ ಎಂಬ ಹೆಸರಿನಿಂದ ಆಚರಿಸಲಾಯಿತು. ಕಲ್ಪತರು ಸಂಸ್ಥೆಯ ಪದಾಧಿಕಾರಿಗಳು, ಪ್ರಾಂಶುಪಾಲರು ಸಮಾರಂಭ ಉದ್ಘಾಟಿಸಿದರು. ಸಮಾರಂಭದಲ್ಲಿ ಪ್ರಕೃತಿಯಲ್ಲಿರುವ ಎಲ್ಲಾ ಬಣ್ಣಗಳ ಮಹತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಡೆಂಘೀಗೆ ಜಾಥಾ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್.ಭೈರಾಪುರ ಗ್ರಾಮದಲ್ಲಿ ತಾಲೂಕು ಆರೋಗ್ಯ ಇಲಾಖೆ ಮತ್ತು ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂಘಿ ಜ್ವರದ ಬಗ್ಗೆ ಗ್ರಾಮಸ್ಥರಿಗೆ ಮತ್ತು ಶಾಲಾ ಮಕ್ಕಳಿಗೆ ಅರಿವು ಹಾಗೂ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಗ್ರಾ.ಪಂ.ಸದಸ್ಯ ತಿಮ್ಮನಾಯ್ಕ, ಸಿ.ಎಚ್.ಐ ಲಕ್ಷ್ಮೀನಾರಾಯಣ, ಆರೋಗ್ಯ ಸಹಾಯಕ ಸತ್ಯನಾರಾಯಣ, ಸೇರಿದಂತೆ ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿದ್ದರು.
ಮಹಿಳೆ ಆತ್ಮಹತ್ಯೆ
ಪಾವಗಡ: ತಲೆ ನೋವು ತಾಳಲಾರದೇ ವಿವಾಹಿತ ಮಹಿಳೆಯೊಬ್ಬರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಪಟ್ಟಣದ ಗುಟ್ಟಹಳ್ಳಿಯಲ್ಲಿ ನಡೆದಿದೆ. ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಮಹಿಳೆ ಆದಿಲಕ್ಷ್ಮಮ್ಮ(48) ಎಂಬುವರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ