ಬೈಲಾಂಜನೇಯ ಜಾತ್ರೆ; ನಿರ್ವಹಣೆಗೆ ಸಮಿತಿ ರಚನೆ
ಬೆಂಗಳೂರು: ತುಮಕೂರು ಜಿಲ್ಲೆ ಊರ್ಡಿಗೆರೆ ಹೋಬಳಿ ಕಾಡುಗುಜ್ಜನಹಳ್ಳಿಯ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಜಾತ್ರೆ ನಿರ್ವಹಣೆಗೆ ಹೈಕೋರ್ಟ್ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಸಮಿತಿ ರಚಿಸಿದೆ. ಜಾತ್ರೆ ನಡೆಸುವ ಅಧಿಕಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮಸ್ಥರ ನಡುವಿನ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ಜಾತ್ರೆ ಜವಾಬ್ದಾರಿ ವಹಿಸಲು ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಸಚ್ಚಿದಾನಂದ ಮೂರ್ತಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿ ರಚಿಸಿದೆ. ತುಮಕೂರಿನ ಕಾಡುಗುಜ್ಜನಹಳ್ಳಿಯಲ್ಲಿನ ಸರ್ಕಾರಿ ಜಮೀನಿನಲ್ಲಿರುವ ಬೈಲಾಂಜನೇಯ ಸ್ವಾಮಿ ದೇಗುಲದ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ದೇಗುಲವನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಆದರೆ, ಪ್ರತಿ ವರ್ಷ ದೇವರ ಜಾತ್ರೆಯನ್ನು ತಾವೇ ನಡೆಸುತ್ತಿದ್ದು, ಈ ಬಾರಿ ಕೂಡ ಏ.7ರಂದು ನಡೆಯಲಿರುವ ಜಾತ್ರೆ ನಡೆಸಲು ತಮಗೆ ಅನುಮತಿ ನೀಡಬೇಕು ಎಂದು ಕೋರಿ ದೇಗುಲದ ಕಾರ್ಯದರ್ಶಿ ಹನುಮಂತರಾಯಪ್ಪ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.