ಮತಯಾಚನೆಗೆ ಚಾಲನೆ ನೀಡಿದ ಸಿಪಿಐ ಚಿನ್ನಪ್ಪ
ಕನ್ನಡಪ್ರಭ ವಾರ್ತೆ, ತುಮಕೂರು, ಮಾ.28
ಇದೇ ಮೊದಲ ಬಾರಿಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಎಡಪಕ್ಷಗಳ ಬೆಂಬಲಿತ ಸಿಪಿಐನ ಜಿಲ್ಲಾ ಖಜಾಂಚಿ ವಿ. ಚಿನ್ನಪ್ಪ ಮತಯಾಚನೆಗೆ ಚಾಲನೆ ನೀಡಿದ್ದಾರೆ.
ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಪ್ಪ, ಈ ದೇಶದಲ್ಲಿ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರನ್ನು ನಮ್ಮನ್ನಾಳಿದ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಸೇರಿದಂತೆ ಬಹುತೇಕ ಪಕ್ಷಗಳು ತುಳಿದಿವೆ. ಇಂದು ರೈತ, ಕಾರ್ಮಿಕರು ಒಂದಾಗಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಲೋಕಸಭೆಯಲ್ಲಿ ತುಳಿತಕ್ಕೊಳಗಾದವರ ಪರವಾಗಿ ಹಾಗೂ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ನೀರಾವರಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ರೈತ, ಕಾರ್ಮಿಕ ಸಮಸ್ಯೆಗಳಿಗೆ ಧನಿಯಾಗಲು ಅವಕಾಶ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಇಂಡೋಸಿಸ್ ಆಂಟಿಶಾಕ್ ಇಂಡಸ್ಟ್ರಿಸ್ನ ಕಾರ್ಮಿಕರು, ತಲಾ 100 ರು. ಗಳಂತೆ 7000 ರು. ಗಳನ್ನು ಚುನಾವಣಾ ನಿಧಿಯನ್ನಾಗಿ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಎ.ಐ.ಟಿ.ಯು.ಸಿ. ಉಪಾಧ್ಯಕ್ಷ ಶಿವಣ್ಣ ಹಾಗೂ ಇಂಡೋಸಿಸ್ ಎಂಪ್ಲಾಯಿಸ್ ಅಸೋಷಿಯೇಷನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನವನೀತ್ ಕುಮಾರ್, ಉಪಾಧ್ಯಕ್ಷ ಎಚ್.ಎಸ್.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಜಗದೀಶ್, ರವಿಕುಮಾರ್ ಟಿ.ಆರ್., ಖಜಾಂಚಿ ದಯಾನಂದ, ಶಿವಪ್ರಸಾದ್, ಲಕ್ಷ್ಮೀಪತಿ, ಶಾಂತಮ್ಮ, ಲೀಲಾವತಿ ಇನ್ನು ಮುಂತಾದವರು ಮಾತನಾಡಿದರು. 250 ಕ್ಕೂ ಹೆಚ್ಚು ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.