ರಕ್ತದಾನ ಜೀವದಾನವಿದ್ದಂತೆ
ತುಮಕೂರು: ರಕ್ತದಾನ ಶ್ರೇಷ್ಠದಾನ. ರಕ್ತದಾನ ಜೀವದಾನವಿದ್ದಂತೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ. ಸಂಜಯ್ ನಾಯಕ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಅಶ್ವಿನಿ ಆಯುರ್ವೇದ ಆಸ್ಪತ್ರೆ, ಎನ್ಎಸ್ಎಸ್ ಘಟಕ ಹಾಗೂ ಬೆಂಗಳೂರಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದ ಕೊರತೆ ಬಹಳಷ್ಟಿದ್ದು, ಎಲ್ಲ ವೈದ್ಯ ವಿದ್ಯಾರ್ಥಿಗಳು ರಕ್ತದಾನ ಮಾಡುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಶಾಮಸುಂದರ್ ಮಾತನಾಡಿ, ಪ್ರತಿನಿತ್ಯ ರಕ್ತದ ಬೇಡಿಕೆ ಹೆಚ್ಚಿರುವ ಕಾರಣ ಆರೋಗ್ಯವಂತ ಯುವಕ-ಯುವತಿಯರು ರಕ್ತದಾನ ಮಾಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ಡಾ.ಕೆ.ಜಿ. ರಾಘೇಂದ್ರ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲಾಗದ್ದರಿಂದ, ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಶಿಬಿರದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರಕಾಶ್ ಪಾಲ್ತ್ಯೆ, ಎನ್ಎಸ್ಎಸ್ ಘಟಕದ ಸಂಯೋಜಕರಾದ ಡಾ. ಅರವಿಂದ್ ಭಟ್ ಮತ್ತು ಡಾ. ಬಾಳೇಶ್ ಉಪಸ್ಥಿತರಿದ್ದರು. ಸ್ಫೂರ್ತಿ ಮತ್ತು ಶೃತಿ ಪ್ರಾರ್ಥಿಸಿ, ಡಾ. ಕೇಶವ್ ಸ್ವಾಗತಿಸಿ, ಡಾ. ಧರ್ಮಪಾಲ್ ವಂದಿಸಿ, ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 50 ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು, ವೈದ್ಯರು ರಕ್ತದಾನ ಮಾಡಿದರು.