ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಹಲವೆಡೆ ಬಿರುಸು ಪ್ರಚಾರ
ಪಾಂಡವಪುರ: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ ಶನಿವಾರ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ತಾಲೂಕಿನ ಕೆನ್ನಾಳು, ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಕಟೇರಿಯಲ್ಲಿ ಬೆಂಬಲಿಗರೊಂದಿಗೆ ಮನೆ ಮೆನೆಗೆ ತೆರಳಿ ಮತಯಾಚನೆ ಮಾಡಿದ ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ, ಯುವ ಜನಾಂಗ ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಿ ದೇಶದಲ್ಲೇ ಮೊದಲ ಸ್ಥಾನಕ್ಕೆರಿಸಿರುವ ನರೇಂದ್ರಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜನತೆ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸುವರು ಎಂದರು. ಜಿಲ್ಲೆಯಲ್ಲಿ ನರೇಂದ್ರ ಮೋದಿ ಅಲೆ ಹೆಚ್ಚಾಗಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜನತೆ ಬಿಜೆಪಿ ಬೆಂಬಲಿಸುವ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸುವ ನಂಬಿಕೆ ನನಗಿದೆ ಎಂದರು.
ಅಂಚೆ ಮೂಲಕ ಮತದಾನ ಸೌಲಭ್ಯ
ತುಮಕೂರು: ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರ ಹಾಗೂ ಇ.ಡಿ.ಸಿ. ಮೂಲಕ ಮತಪತ್ರ ಚಲಾಯಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರು ತಿಳಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದೊಳಗೆ ನಿಯೋಜಿಸಲಾಗಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಇ.ಡಿ.ಸಿ. ಮೂಲಕ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಹೊರಗೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರ ಮೂಲಕ ಮತಚಲಾಯಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ನೇಮಕಾತಿಗಳ ಆದೇಶಗಳೊಂದಿಗೆ ಈ ಸೌಲಭ್ಯ ಪಡೆಯುವ ಅರ್ಜಿ ನಮೂನೆ 12 ಮತ್ತು 12ಎ ಗಳನ್ನು ಒದಗಿಸಲಾಗಿದೆ ಎಂದರು.