ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆ ಕಾವಲ್ಲೂ ಹಬ್ಬ ಬಲು ಜೋರು

Rashmi Kasaragodu
Updated On : 31 Mar 2014, 12:05 pm

ತುಮಕೂರು: ಚುನಾವಣೆಯ ಕಾವು ಯುಗಾದಿ ಸಂಭ್ರಮಕ್ಕೆ ಎಳ್ಳಷ್ಟು ತೊಂದರೆ ಮಾಡಿಲ್ಲ. ಬದಲಿಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ಕಡೆ ಅಬ್ಬರದ ಪ್ರಚಾರದ ಮಧ್ಯೆಯೇ ಹಬ್ಬದ ಸಂಭ್ರಮವೂ ಜೋರಾಗಿದೆ. ತುಮಕೂರಿನ ಸಿದ್ಧಿವಿನಾಯಕ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ವಸ್ತುಗಳಿಗೆ ಜನ ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಹೂವು, ತರಕಾರಿ ವಸ್ತುಗಳು ಗಗನಕ್ಕೆ ಏರಿದೆ. ಒಂದು ಮಾರಿನ ಹೂವಿನ ಬೆಲೆ 100 ರು.ಗೆ ಏರಿದೆ. ಆದರೂ ಹೂವಿನ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಿಂದ ಮಾರುಕಟ್ಟೆಗೆ ಹೋಗುವ ದಾರಿಯಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ, ವಾಹನಗಳ ಓಡಾಟ ಜೋರಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ಜನ ಮಾರುಕಟ್ಟೆ ಎಡತಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೂವು, ಹಣ್ಣು, ತರಕಾರಿ ಖರೀದಿಯ ಜತೆಗೆ ಕೋಳಿ ಖರೀದಿಯಲ್ಲೂ ಜನ ಮುಗಿ ಬೀಳುತ್ತಿದ್ದಾರೆ.
ತುಮಕೂರಿನ ಎಂ.ಜಿ. ರಸ್ತೆ, ಬಸ್ ನಿಲ್ದಾಣ, ಎಸ್.ಎಸ್. ಪುರಂ ಮುಂತಾದ ಕಡೆ ಹಬ್ಬದಿಂದ ಕಳೆ ಕಟ್ಟಿದೆ. ಬಟ್ಟೆ ಅಂಗಡಿ, ಸಿಹಿ ತಿನಿಸುಗಳ ಅಂಗಡಿಗಳಲ್ಲೂ ಜನ ಎಡತಾಕುತ್ತಿದ್ದಾರೆ. ಹಾಗೆಯೇ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ಜನ ನಿಂತು ಹಣ ತೆಗೆಯುತ್ತಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಬ್ಬದ ಸಂಭ್ರಮವೂ ಜೋರು ಮತ್ತು ರೇಟು ಕೂಡ ದುಬಾರಿಯಾಗಿದೆ. ಆದರೂ ಜನರಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಖರೀದಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ರೇಟು ದುಬಾರಿಯಾದರೂ ಜನರಲ್ಲಿ ಉತ್ಸಾಹ ಮಾತ್ರ ಎಳ್ಳಷ್ಟು ಬತ್ತಿಲ್ಲ ಎನ್ನುತ್ತಾನೆ ವ್ಯಾಪಾರಿ ವಕ್ಕೋಡಿಯ ಗಿರೀಶ್.
ಮಾರುಕಟ್ಟೆಯಲ್ಲೇ ಪ್ರಚಾರ: ಮಾರುಕಟ್ಟೆಯಲ್ಲಿ ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಭಾಗದಿಂದ ಜನ ಬಂದು ಖರೀದಿ ಮಾಡುತ್ತಾರೆ ಎಂಬ ಸುಳಿವು ಅರಿತ ರಾಜಕೀಯ ನೇತಾರರು ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಪ್ರಚಾರ ಕೂಡ ನಡೆಸಿದರು. ಎಲ್ಲಾ ಪಕ್ಷಗಳ ಮುಖಂಡರು ಹಬ್ಬಕ್ಕೆ ಖರೀದಿಗೆಂದು ಬಂದ ಜನರಲ್ಲಿ ಮತ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನಜಂಗುಳಿ ಹೆಚ್ಚಾದ್ದರಿಂದ ವಾಹನ ಸವಾರರಿಗೆ ಸ್ವಲ್ಪ ತ್ರಾಸಾಯಿತು.
ಇನ್ನು ಮಾರುಕಟ್ಟೆ ಹೊರೆತುಪಡಿಸಿದರೆ ತುಮಕೂರಿನ ಬೇರೆ ಬೇರೆ ಬಡಾವಣೆಗಳಲ್ಲೂ ಕೂಡ ಹೂವು, ತರಕಾರಿ, ಹಣ್ಣು ಸಿಗುತ್ತಿರುವುದರಿಂದ ಎಲ್ಲಾ ಬಡಾವಣೆಗಳಲ್ಲೂ ಸಣ್ಣ ಮಾರುಕಟ್ಟೆಯೇ ನಿರ್ಮಾಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement