ಬಾಲಸಂಸ್ಕಾರ ಉಚಿತ ಶಿಬಿರ
ಕುಣಿಗಲ್: ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸೌಜನ್ಯ, ಸಹನಾಶೀಲತ ಸೇರಿದಂತೆ ಹಲವು ಧಾರ್ಮಿಕ ಗುಣಗಳನ್ನು ರೂಢಿಸಿಕೊಂಡು ಅವರು ದೇಶದ ಅಮೂಲ್ಯ ಸಂಪತ್ತಾಗುವ ಹಿನ್ನೆಲೆಯಲ್ಲಿ ತಾಲೂಕಿನ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಚಿತ ಬಾಲಸಂಸ್ಕಾರ ಶಿಬಿರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ,
ಪ್ರಸಕ್ತ ಸಾಲಿನ ಉಚಿತ ಬಾಲಸಂಸ್ಕಾರ ಶಿಬಿರವನ್ನು ಏಪ್ರಿಲ್ ತಿಂಗಳ 2ರಿಂದ 5ರವರೆಗೆ ಪಟ್ಟಣದ ಚೌಡೇಶ್ವರಿ ದೇವಲಾಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರವು ದಿನಂ ಪ್ರತಿ ಬೆಳಗ್ಗೆ ಹತ್ತುವರೆಯಿಂದ ಮಧ್ಯಾಹ್ನ
ಒಂದೂವರೆ ಗಂಟೆವರೆಗೂ ನಡೆಯಲಿದ್ದು, ಶಿಬಿರದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳು, ಆದರ್ಶಜೀವನ ಪದ್ಧತಿ, ಸುಸಂಸ್ಕೃತ ನಡೆ-ನುಡಿ, ಪರಿಸರ ಸ್ನೇಹಿ ಜೀವನ, ಹಿಂದೂ ಧರ್ಮದಲ್ಲಿ ಆಚರಿಸುವ ಹಬ್ಬ, ಉತ್ಸವ, ಆಚರಣೆಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳ ವೈಜ್ಞಾನಿಕ ಮಹತ್ವ, ಅವುಗಳ ಆಚರಣೆಯಿಂದ ಮನುಷ್ಯನ ಕಲ್ಯಾಣ ಹೇಗೆ ಆಗುತ್ತದೆ. ಹಿಂದೂ ಧರ್ಮಶಾಸ್ತ್ರದ ಶಾಸ್ತ್ರೀಯ ಅಧ್ಯಯನ ಹೇಗೆ ಮಾಡಬೇಕು ಎಂಬುದನ್ನು ಕಲಿಸಲಾಗುತ್ತದೆ.
ಪ್ರಾಯೋಗಿಕ ಭಾಗಗಳಲ್ಲಿ ಶ್ಲೋಕ, ಪ್ರಾರ್ಥನೆಗಳನ್ನು ಹೇಗೆ ಹೇಳಬೇಕು, ಭಗವಂತನ ನಾಮಸ್ಮರಣೆ ಹೇಗೆ ಮತ್ತು ಏಕೆ ಮಾಡಬೇಕು ಎಂಬುದನ್ನು ಪ್ರತ್ಯಕ್ಷವಾಗಿ ಹೇಳಿಕೊಡಲಾಗುತ್ತದೆ. ಭಾರತೀಯ ಪದ್ಧತಿಯಲ್ಲಿ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದನ್ನು ಕಲಿಸಲಾಗುತ್ತದೆ. ಸಾತ್ವಿಕ ಆಹಾರದ ಮಹತ್ವ, ಆಧುನಿಕ ಜಂಕ್‌ಫುಡ್‌ಗಳಿಂದಾಗುವ ಹಾನಿ, ದುಶ್ಚಟಗಳ ಭಯಾನಕ ಪರಿಣಾಮಗಳು ಮತ್ತು ದುಶ್ಚಟಗಳಿಂದ ಹೇಗೆ ದೂರವಿರಬೇಕೆಂಬ ಮಾಹಿತಿ ಜೊತೆಗೆ ಇತರೆ ಧಾರ್ಮಿಕ ಸಂಸ್ಕಾರಪೂರಕ ಕಾರ್ಯಕ್ರಮಗಳ ಬಗ್ಗೆ ಅರಿವನ್ನು ಮೂಡಿಸಲಾಗುವುದು. ಆಸಕ್ತ ಪೋಷಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹೆಚ್ಚಿನ ವಿವರಗಳಿಗೆ ಪ್ರತಿಭಾ ಸುಧಾಕರ್, (7204082628) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.