ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರೋಗ್ಯಪ್ರಜ್ಞೆಗೆ ಸಾಹಿತ್ಯ ಕೊಡುಗೆ ಅಪಾರ

Mainashree
Updated On : 2 May 2014, 1:04 am

ತುಮಕೂರು: ಆರೋಗ್ಯದ ಬಗ್ಗೆ ನಮ್ಮ ಹೃದಯ ತಟ್ಟುವಂತೆ ಹೇಳುವ ಕ್ರಿಯೆಯನ್ನು ವೈದ್ಯರಲ್ಲದೆ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಡಾ. ಅನುಪಮ ನಿರಂಜನ, ಡಾ. ಸಿ.ಆರ್. ಚಂದ್ರಶೇಖರ್‌ರಂತಹ ವೈದ್ಯಕೀಯ ಲೇಖಕರ ಪರಂಪರೆಯೇ ಕನ್ನಡ ಸಾಹಿತ್ಯದಲ್ಲಿದ್ದು ತಮ್ಮ ಸಾಹಿತ್ಯದ ಮೂಲಕ ಆರೋಗ್ಯಪ್ರಜ್ಞೆ ಹೆಚ್ಚಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಲೇಖಕಿ ಸುಶೀಲಾ  ಸದಾಶಿವಯ್ಯ ಹೇಳಿದರು.
ಅವರು ಕ್ಯಾತ್ಸಂದ್ರದ ಡಾ. ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಆಯೋಜಿಸಿದ್ದ ಕವಿ ಡಾ. ಕೆ.ಬಿ.ಭರತ್ ರಾಜ್ ಅವರ ಅಂತರಾಳ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಕವನ ಸಂಕಲನದಲ್ಲಿ ಪ್ರತಿಯೊಂದು ಕವನವೂ ಸಕಾರಾತ್ಮಕ ಚಿಂತನೆಗಳಿಂದ ಕೂಡಿದೆ ಸಮಾಜದಲ್ಲಿ ಕ್ರೌರ್ಯಗಳು ಹೆಚ್ಚಾಗಿದ್ದು ನಿರಾಸೆ ಹೊಂದುವ ಸ್ಥಿತಿಯಲ್ಲಿದ್ದೇವೆ. ಈ ಕಾರಣಕ್ಕಾಗಿ ಸಕಾರಾತ್ಮಕ ಚಿಂತನೆಗಳು ಅವಶ್ಯ. ಸಕಾರಾತ್ಮಕ ಚಿಂತನೆಗಳು ಬದುಕಿನಲ್ಲಿ ಜೀವನೋತ್ಸಾಹವನ್ನು ಚಿಗುರಿಸುತ್ತವೆ. ಕವಿ ಡಾ. ಕೆ.ಬಿ. ಭರತ್‌ರಾಜ್ ಅವರು ಈ ಕೃತಿಯಲ್ಲಿ ತಮ್ಮ ಆಂತರ್ಯವನ್ನು ಪುಟಕ್ಕಿಟ್ಟ ಚಿನ್ನದಂತೆ ಅನಾವರಣಗೊಳಿಸಿದ್ದಾರೆ ಎಂದರು.
ಭಾರತದಲ್ಲಿದೆ: ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಮಾತನಾಡಿ ಜಗತ್ತಿನಲ್ಲಿ ಇರುವುದೆಲ್ಲಾ ಭಾರತದಲ್ಲಿದೆ. ಭಾರತದಲ್ಲಿ ಇಲ್ಲದಿರುವುದು ಬೇರೆಲ್ಲೂ ಇಲ್ಲಾ. ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ ಸುಸಂಸ್ಕೃತಿಯ ಸಮಾಜ ಹೊಂದಿ ಹಲವು ಧರ್ಮ, ಸಂಸ್ಕೃತಿ, ಭಾಷೆಗಳ ಸಂಗಮವಾಗಿ ಆಧ್ಯಾತ್ಮದ ಮೇರು ಶಿಖರದಲ್ಲಿರುವ ಭಾರತವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ನಮ್ಮ ರಾಜಕಾರಣಿಗಳು ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿದ್ದಾರೆ. ಇವರು ಕತ್ತರಿಯಂತೆ ಕೆಲಸ ಮಾಡಿದರೆ ಅಣ್ಣಾ ಹಜಾರೆ, ಸೂಫಿ ಸಂತರು, ಶಿಶುನಾಳ ಷರೀಫರು ಸಮಾಜವನ್ನು ಒಂದು ಮಾಡುವ ಸೂಜಿಯಂತೆ ಮಹಾನ್ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ತುಮಕೂರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರೂ ಹಾಗೂ ಕವಿ ಡಾ. ಟಿ.ಎ.ಈಶ್ವರಯ್ಯನವರು ಮಾತನಾಡಿ, ವೈದ್ಯರಿಗೆ ತಮ್ಮದೇ ಆದ ಒತ್ತಡ ಹಾಗೂ ಜವಾಬ್ದಾರಿಗಳಿವೆ. ಇಂತಹ ಒತ್ತಡಗಳ ನಡುವೆಯೂ ಸಾಹಿತ್ಯಕ ಹವ್ಯಾಸಿ ಲೇಖಕರಿಗೆ ಸಮಾಜಕ್ಕೆ ಬರೆಯುವ ಹೊಣೆಗಾರಿಕೆ ಇದೆ. ವೈದ್ಯರು ಮನಮುಟ್ಟುವಂತೆ ಹಾಗೂ ತಪ್ಪು ಮಾಡಿದವರಿಗೆ ಕಿವಿಹಿಂಡಿ ಬರೆಯಬೇಕು ಎಂದು ಹೇಳಿದರು.
ಆಶಯನುಡಿಗಳನ್ನು ಲೇಖಕಿ ಪದ್ಮಾಕೃಷ್ಣಮೂರ್ತಿ  ಆಡಿದರು. ತುಮಕೂರಿನ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ  ಡಾ. ಟಿ.ಎಸ್. ಶಶಿಧರ್, ಜಿ.ಕೆ.ಕುಲಕರ್ಣಿ, ಎ.ವಿ. ಶ್ರೀಗಣೇಶ್, ಟಿ.ಎನ್. ಹೊನ್ನೇಶ್, ಶೆ.ನಂ.ಸಿದ್ಧಲಿಂಗಪ್ಪ, ಬೆಂಗಳೂರಿನ ಎನ್. ಧನಪಾಲ್, ಡಾ.  ಟಿ.ಎ.ಈಶ್ವರಯ್ಯ ವಾಚಿಸಿದರು. ಶೃತಿ ಎಸ್.ಮೂರ್ತಿ ಪ್ರಾರ್ಥಿಸಿದರು. ಕಮಲಾ ಬಡ್ಡಿಹಳ್ಳಿ ಸ್ವಾಗತಿಸಿದರು. ಅಬ್ಬಿನಹೊಳೆ ಸುರೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement