ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ವಿಳಂಬ ತಾ.ಪಂ. ಅಧ್ಯಕ್ಷ ಗರಂ
ಹುಳಿಯಾರು: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ತಾಲೂಕು ಪಂಚಾಯ್ತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆಂದು ತಾ.ಪಂ. ಅಧ್ಯಕ್ಷ ಕೆಂಕೆರೆ ನವೀನ್ ಆರೋಪಿಸಿದ್ದಾರೆ.
ಕಳೆದ ಮಾರ್ಚ್ ಮೊದಲ ವಾರದಿಂದಲೇ ಲೋಕಸಭಾ ಚುನಾವಣಾ ನೀತಿಸಂಹಿತೆಯಿಂದ ಯೋಜನೆ ನೆನೆಗುದಿಗೆ ಬಿದ್ದು, ಇದೀಗ ಚುನಾವಣೆ ಮುಗಿದು ನೀತಿ ಸಂಹಿತಿ ಸಡಿಲ ಗೊಂಡಿದ್ದರೂಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಅಲ್ಲದೆ ನೀತಿಸಂಹಿತೆ ಜಾರಿಯಾಗುವುದಕ್ಕೂ ಒಂದು ವಾರ ಮೊದಲೇ ಖಾತ್ರಿಯೋಜನೆಯಡಿಯ ಕಾಮಗಾರಿಗಳ ಅನುಷ್ಠಾನಕ್ಕೆ ಕತ್ತರಿ ಹಾಕಿದರು. ಈಗಾಗಲೇ ಉದ್ಯೋಗ ಖಾತ್ರಿ ಯೊಜನೆಯಡಿ ರೈತರು ತಮ್ಮ ಜಮೀನುಗಳಲ್ಲಿ ಹುದಿ,ಬದು ಸೇರಿದಂತೆ ಚೆಕ್ ಡ್ಯಾಂ, ಕೊಟ್ಟಿಗೆ ಮನೆ, ಶೌಚಾಲಯ ನಿರ್ಮಿಸಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಕನಿಷ್ಠ ಕೂಲಿ ಹಣ ಸಂದಾಯವಾಗಿಲ್ಲ. ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳನ್ನು ಪ್ರಶ್ನಿಸಿದರೆ ಜಿಪಂ ಉಪಕಾರ್ಯದರ್ಶಿ ಅಥವಾ ಸಿಎಸ್ ಅವರ ಮೇಲೆ ಹೇಳುತ್ತಾರೆ. ಖಾತ್ರಿ ಯೋಜನೆಗೆ ಸಂಬಂಧಿದ ಪಾಸ್ವರ್ಡ್ ಅನ್ನು ಪಂಚಾಯ್ತಿಗಳಿಗೆ ನೀಡದಿರುವುದರಿಂದ ಹಣ ಬಿಡುಗಡೆಗೊಳ್ಳುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ರೈತರೊಡಗೂಡಿ ತಾ.ಪಂ.ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.