ದೇಗುಲ ಪ್ರಸಾದದಲ್ಲೂ ಗೋಲ್ಮಾಲ್!
ಕುಣಿಗಲ್: ತಾಲೂಕಿನ ಮತ್ತು ರಾಜ್ಯದ ಪ್ರಸಿದ್ಧಯಾತ್ರಾ ಸ್ಥಳವಾದ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ, ಶ್ರೀ ಸ್ವಾಮಿಯವರ ಪ್ರಸಾದವೆಂದು ಮಾರಾಟ ಮಾಡುವ ಲಾಡು ಮತ್ತು ಕೊಬ್ಬರಿ
ಮಿಠಾಯಿ ಗುಣಮಟ್ಟ ಮತ್ತು ತೂಕಗಳಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದ್ದು, ದೇವರ ಪ್ರಸಾದದ ವಿಷಯದಲ್ಲೂ ವಂಚನೆ ಮಾಡಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿಹಕ್ಕು ಕಾರ್ಯಕರ್ತ ತಮ್ಮಣ್ಣ ಗೌಡ ಒತ್ತಾಯಿಸಿದ್ದಾರೆ.
ಎಡೆಯೂರು ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಸೇರಿದಂತೆ ಸಾಮಾನ್ಯ ದಿನಗಳಲ್ಲೂ ಸಾವಿರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಸ್ವಾಮಿಯವರ ಪ್ರಸಾದವೆಂದು ಪ್ರಸಾದ ರೂಪದ ಲಡ್ಡು ಮತ್ತು ಕೊಬ್ಬರಿ ಮಿಠಾಯಿಗಳನ್ನು ಖರೀದಿಸುತ್ತಿದ್ದಾರೆ. ಆದರೆ, ಈ ಪ್ರಸಾದದಲ್ಲಿನ ಗುಣಮಟ್ಟ, ತೂಕದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿಬಂದ ಹಿನ್ನೆಲೆಯಲ್ಲಿ ಮಾಹಿತಿಹಕ್ಕು ಕಾರ್ಯಕರ್ತ ತಮ್ಮಣ್ಣಗೌಡ, ಇತರರು ಬುಧವಾರ ದೇವಾಲಯಕ್ಕೆ ತೆರಳಿ ಪ್ರಸಾದವನ್ನು ಖರೀದಿಸಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳ ಮುಂದೆಯೇ ತೂಕ ಹಾಕಲಾಗಿ 10 ಲಾಡುಗಳ ತೂಕ 650 ಗ್ರಾಂ.ಬದಲಾಗಿ 410ಗ್ರಾಂ, 10ಮಿಠಾಯಿಗಳ ತೂಕ 500ಗ್ರಾಂ..ಬದಲಾಗಿ 320 ಗ್ರಾಂ.ಇತ್ತು.
ಇನ್ನು ಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ, ಪರಿಸರ ಇಲಾಖೆ ನಿಷೇಧಿಸಿದ ಗುಣಮಟ್ಟದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ನಂತರ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರನ್ನು ಸಲ್ಲಿಸಿ ದೋಷ ಕಂಡು ಬಂದ ಪ್ಯಾಕೆಟ್‌ಗಳ ಮಹಜರ್ ವರದಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ಧರ ಮೇರೆಗೆ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕುಮಾರಯ್ಯ ದೂರನ್ನು ಸ್ವೀಕರಿಸಿ, ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೆ ದೂರಿನ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಮ್ಮಣ್ಣಗೌಡ ತಿಳಿಸಿದ್ದಾರೆ.