'ಗ್ರಾಮಲೆಕ್ಕಿಗರು ಸರ್ಕಾರ- ಜನತೆ ಸಂಪರ್ಕ ಸೇತುವೆ'
ಕುಣಿಗಲ್: ಗ್ರಾಮಲೆಕ್ಕಿಗರು ಸರ್ಕಾರ ಮತ್ತು ಜನತೆಯ ನಡುವೆ ಸಂಪರ್ಕ ಸೇತುವೆಯಂತಿದ್ದು, ತಮ್ಮ ಹಲವು ಸಮಸ್ಯೆಗಳನ್ನು ಹೊತ್ತುಬರುವ ಗ್ರಾಮಾಂತರ ಪ್ರದೇಶದ ಜನತೆಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿರಬೇಕೆಂದು ಶಿರಸ್ತೆದಾರ್ ಮಂಜುನಾಥ್ ಸೂಚನೆ ನೀಡಿದರು.
ಪಟ್ಟಣದ ಕಂದಾಯಭವನದಲ್ಲಿ ಗ್ರಾಮ ಲೆಕ್ಕಿಗರ ಲೇಖನಾನುದಾನ ಯೋಜನೆ ಅಡಿಯಲ್ಲಿ, ಗ್ರಾಮಲೆಕ್ಕಿಗರು ಕಡತ ಸೇರಿದಂತೆ ಕೆಲ ಅಮೂಲ್ಯ ದಾಖಲೆಗಳನ್ನು ಇಟ್ಟುಕೊಳ್ಳಲು ಬೀರು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮಲೆಕ್ಕಿಗರ ಜವಾಬ್ದಾರಿ ಮತ್ತು ಕರ್ತವ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದು, ಅಧಿಕ ಕಾರ್ಯಭಾರದ ಒತ್ತಡದ ಜೊತೆಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸಬಹುದಾಗಿದೆ. ಗ್ರಾಮಾಂತರ ಪ್ರದೇಶದಿಂದ ಬರುವ ಹಲವು ಭೂಮಾಲೀಕರ ಮುಖ್ಯವಾಗಿ ರೈತರ ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ಭೂದಾಖಲೆಗಳ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಜೊತೆಯಲ್ಲಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ, ಭಾಗ್ಯಲಕ್ಷ್ಮಿ ಯೋಜನೆಗಳ ಸವಲತ್ತು ಪಡೆಯಲು ಬರುವಂತ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ತಲುಪುವ ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷರಾದ ಟಿ.ಸಿ.ಜಯಪ್ರಕಾಶ್ ಒಟ್ಟಾರೆ 47 ಮಂದಿ ಗ್ರಾಮಲೆಕ್ಕಿಗರಿಗೆ ಅಲ್ಮೆರ ನೀಡಲಾಗುತ್ತಿದ್ದು, ಗ್ರಾಮಲೆಕ್ಕಿಗರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.