'ಜಾತ್ಯತೀತ ಸಮಾಜದ ಪರಿಕಲ್ಪನೆ ತಿಳಿಸಿಕೊಟ್ಟವರೇ ಬಸವಣ್ಣ'
ಚಿಕ್ಕನಾಯಕನಹಳ್ಳಿ: ಜಾತ್ಯತೀತ ಸಮಾಜದ ಪರಿಕಲ್ಪನೆಯನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟವರೇ ಬಸವಣ್ಣನವರು ಎಂದು ತಹಸೀಲ್ದಾರ್ ಕಾಮಾಕ್ಷಮ್ಮನವರು ನುಡಿದರು.
ಶುಕ್ರವಾರ ಅವರು ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಅಂದಿನ ಸಮಾಜದಲ್ಲಿದ್ದ ಮೇಲು ಕೀಳೆಂಬ ಭಾವನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ, ಕೈಗೊಂಡ ಸುಧಾರಣೆಯ ಪ್ರಯತ್ನ ಒಂದು ಕ್ರಾಂತಿಯಾಗಿ ರೂಪುಗೊಂಡಿತು. ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ಅನಿಷ್ಟಗಳನ್ನು ಅವರು ಮೇಲ್ವರ್ಗದವರ ವಿರೋಧದ ನಡುವೆಯು ಅಂಜದೆ ಕಾರ್ಯರೂಪಕ್ಕೆ
ತರಲು ಹೋರಾಟ ನಡೆಸಿದರು. ಊಳಿಗಮಾನ್ಯ ಪದ್ಧತಿಯನ್ನವರು ಎಂದೂ ಸಮರ್ಥಿಸಲಿಲ್ಲ.
ಬಸವಣ್ಣನವರು ಧಾರ್ಮಿಕ ಚಿಂತನೆಯುಳ್ಳವರಾಗಿದ್ದರೂ ಎಂದೂ ಅವರು ಮೂಢನಂಬಿಕೆಯನ್ನು ಪ್ರೋತ್ಸಾಹಿಸದೆ,ಅವುಗಳ ವಿರುದ್ಧ ಸಮರ ಸಾರಿದರು. ಲಿಂಗಭೇದದ ವಿರುದ್ಧ ಸಿಡಿದೇಳುವ ಮೂಲಕ ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದನೆ ಮಾಡಿದರು.
ಇಂದಿನ ಜಾತಿರಹಿತ ಸುಂದರ ಸಮಾಜದ ಕಲ್ಪನೆಯನ್ನು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಕನಸು ಕಂಡಿದ್ದರು. ಅವರ ಆಶಯವನ್ನು ನೆರವೇರಿಸುವ ನಿಟ್ಟಿನಲ್ಲಿ ನಾವೆಲ್ಲಾ ದುಡಿಯಬೇಕಾಗಿದೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶ ಶೆಟ್ಟಿ, ಕೆ.ಜಿ. ಕೃಷ್ಣೇಗೌಡ, ಪಶುಸರೋಪಪನಾ ಇಲಾಖೆಯ ಡಾ.ಶಶಿಧರ್ ಮುಂತಾದವರಿದ್ದರು.