ಯಾದವ ಸಮಾಜದ ಮಹಿಳೆಗೆ ತಾಪಂ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ
ಶಿರಾ: ಹುಲಿಕುಂಟೆ ತಾಲೂಕು ಪಂಚಾಯತಿ ಕ್ಷೇತ್ರ ಪ್ರತಿನಿಧಿಸುವ ಯಾದವ ಸಮಾಜದ ಮಹಿಳೆಗೆ ಈ ಬಾರಿ
ತಾಲೂಕು ಪಂಚಾಯತಿ ಅಧ್ಯಕ್ಷ ಸ್ಥಾನ ನೀಡುವಂತೆ, ಯಾದವ ಯುವಕ ಸಂಘದ ಪದಾಧಿಕಾರಿಗಳು ಮತ್ತು ಜೆಡಿಎಸ್ ಮುಖಂಡರು ಪಕ್ಷದ ವರಿಷ್ಠರಲ್ಲಿ ಒತ್ತಾಯಿಸಿದ್ದಾರೆ.
ಆಡಳಿತ ಅವಧಿಯಲ್ಲಿ ಪ್ರತಿ 20 ತಿಂಗಳುಗಳಂತೆ ಆಡಳಿತ ನಡೆಸಲು, 3 ಸಲ ಮೀಸಲಾತಿ ನಿಗದಿಯಾಗಲಿದ್ದು, ಕೊನೆ ಅವಧಿಯ ಆಡಳಿತ ನಡೆಸಲು ಹಿಂದುಳಿದ ವರ್ಗದ ಮಹಿಳೆಗೆ ಮೀಸಲು ನಿಗದಿಯಾಗಿದೆ.
ತಾಲೂಕಿನ ಕಸಬಾ, ಬುಕಾಪಟ್ಟಣ್ಣ ಹೋಬಳಿಗಳಿಗೆ ಹೆಚ್ಚು ರಾಜಕೀಯ ಪ್ರಧಾನ್ಯತೆ ಸಿಕ್ಕಿದ್ದು, ಧೀರ್ಘಾವಧಿಯಿಂದ ಹುಲಿಕುಂಟೆ ಹೋಬಳಿಗೆ ತಾಪಂ ಆಡಳಿತ ಚುಕ್ಕಾಣಿ ಸಿಕ್ಕಿಲ್ಲ, ತಾಲೂಕು ಪಂಚಾಯತಿಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಹೆಚ್ಚಾಗಿದ್ದು ಸಂಪೂರ್ಣ ಬಹುಮತವಿದೆ. ಈ ಬಾರಿ ಹುಲಿಕುಂಟೆ ತಾಲೂಕು ಪಂಚಾಯತಿ ಸದಸ್ಯೆ ಛಾಯಾದೇವಿ ಹಿಂದುಳಿದ ವರ್ಗದ ಯಾದವ ಸಮಾಜವನ್ನು ಪ್ರತಿನಿಧಿಸುತ್ತಿದ್ದು ಅಧ್ಯಕ್ಷಗಾದಿಯ ಆಕಾಂಕ್ಷಿಯಾಗಿದ್ದಾರೆ.
ಇತ್ತಿಚೇಗೆ ಹೃದಯಾಘಾತದಿಂದ ನಿಧನರಾದ ಹಿಂದುಳಿದ ವರ್ಗದ ನಾಯಕ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಬಿ.ಕೆ.ಬಡೀರಣ್ಣ ಯಾದವ ಸಮಾಜದ ನೇತಾರರಾಗಿದ್ದರು.
ಅವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು, ಈ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಅಗಲಿದ ನಾಯಕನ ಆತ್ಮಕ್ಕೆ ಶಾಂತಿ ಕೋರುವ ಸದುದ್ದೇಶದಿಂದ ಹುಲಿಕುಂಟೆ ತಾಲೂಕು ಪಂಚಾಯತಿ ಕ್ಷೇತ್ರ ಪ್ರತಿನಿಧಿಸುವ ಸದಸ್ಯೆ ಛಾಯಾದೇವಿಗೆ ಅಧ್ಯಕ್ಷ ಸ್ಥಾನ ನೀಡಿ ಆಯ್ಕೆ ಮಾಡುವಂತೆ ಜೆಡಿಎಸ್ ವರಿಷ್ಠರಲ್ಲಿ ಡಾ.ನಾಗರಾಜು, ಹುಲಿಕುಂಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೈ.ಕೆ.ತಿಪ್ಪೇಸ್ವಾಮಿ, ಅಶೋಕ್ ಗೌಡ, ಎಸ್,ಪರಮೇಶ್, ಚಿಕ್ಕಸಿದ್ದಪ್ಪ, ಸಿ.ಡಿ.ಜನಾರ್ದನ, ಬಾಲೇಗೌಡ, ರಾಮಕೃಷ್ಣ, ವಾಜರಹಳ್ಳಿ ನರಸಿಂಹೇಗೌಡ ಸೇರಿದಂತೆ ಯಾದವ ಯುವಕ ಸಂಘದ ಪಧಾಧಿಕಾರಿಗಳು ಮನವಿ ಮಾಡಿದ್ದಾರೆ.