ಶಿಕ್ಷಣದಿಂದ ಅಂತಃಕರಣ ಕಲಿಸಲು ಸಾಧ್ಯವಿಲ್ಲ
ಕ.ಪ್ರ.ವಾರ್ತೆ ತುಮಕೂರು ಮೇ 2
ಅಂತಃಕರಣ, ಆತ್ಮೀಯತೆಯನ್ನು ಯಾವುದೇ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಿಂದ ಕಲಿಸಲು ಸಾಧ್ಯವಿಲ್ಲ.
ಅದು ತಂದೆ, ತಾಯಿ, ಗುರು ಹಿರಿಯರು ಮಕ್ಕಳಿಗೆ ನೀಡುವ ಅತ್ಯಂತ ಮೌಲ್ಯಯುತ ಕೊಡುಗೆ ಎಂದು ಶ್ರೀಪತಂಜಲಿ ಯೋಗಶಿಕ್ಷಣ ಸಮಿತಿಯ ಪ್ರಧಾನ ಸಂಚಾಲಕ ಅ.ರ.ರಾಮುಸ್ವಾಮಿ ತಿಳಿಸಿದ್ದಾರೆ.
ನಗರದ ಬೈಲಾಂಜನೇಯ ದೇವಾಲಯದ ಸಮೀಪ ನಿರ್ಮಿಸಿರುವ ಶ್ರೀಪತಂಜಲಿ ಯೋಗ ಮಂದಿರದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಶ್ರೀಪತಂಜಲಿ ಯೋಗವುಂದಿರಕ್ಕೆ ಬರುವ ಯೋಗಪಟುಗಳಿಗೆ ಯೋಗದ ಜೊತೆಗೆ ಅಂತಃಕರಣ, ಪ್ರೀತಿ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳೆದ 35 ವರ್ಷಗಳ ಹಿಂದೆ 48 ಜನರಿಂದ ಪ್ರಾರಂಭಿಸಲಾದ ಪತಂಜಲಿ ಯೋಗ ಶಿಕ್ಷಣ ಇಂದು ಪ್ರಪಂಚದ 12 ರಾಷ್ಟ್ರದಲ್ಲಿ 630 ಶಾಖೆಗಳನ್ನು ಹೊಂದಿದ್ದು 17 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಒಳಗೊಂಡಿದೆ. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ತಾನು ಕಳೆದುಕೊಳ್ಳುತ್ತಿರುವ ಮಹತ್ವದ ಕ್ಷಣಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಪುಟ್ಟ ವೇದಿಕೆಯನ್ನು ನಾವು ಕಲ್ಪಿಸುತ್ತಿದ್ದೇವೆ ಎಂದು ರಾಮುಸ್ವಾಮಿ ನುಡಿದರು.
ಒಳ್ಳೆ ವೇದಿಕೆ: ಯೋಗವೆಂಬುದು ದೈಹಿಕ ನೂನ್ಯತೆಯನ್ನು ಸರಿಪಡಿಸುವ ಕ್ರಿಯೆಯಲ್ಲ. ಅದು ಮನುಷ್ಯನ ಒಳಗಿನ ವ್ಯಕ್ತಿತ್ವವನ್ನು ಹೊರ ಹೊಮ್ಮಿಸಲು ಒಂದು ಒಳ್ಳೆಯ ವೇದಿಕೆಯಾಗಿದೆ. ವೇದ ಉಪನಿಷತ್ ಓದಿದರೆ ಮಾತ್ರ ಮನುಷ್ಯನ ಯೋಗ್ಯತೆ ಹೆಚ್ಚುವುದಿಲ್ಲ. ಆತನ ನಡೆವಳಿಕೆ ಮಾತ್ರ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅ.ರ.ರಾಮುಸ್ವಾಮಿ ನುಡಿದರು. ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಲಿ, ಮಠಾಧೀಶರಾಗಿರಲಿ ಎಲ್ಲರಿಗೂ ಸಮಯ ಪ್ರಜ್ಞೆ ಅತಿ ಮುಖ್ಯ. ಸಮಯಕ್ಕೆ ಬೆಲೆ ನೀಡಿದ ವ್ಯಕ್ತಿಯಿಂದ ಯಾವುದೇ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ವೆಂದರು. ಸಾನಿಧ್ಯವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಡಾ.ಎಂ.ಆರ್. ಹುಲಿನಾಯ್ಕರ್, ಅರವಿಂದ ಗುರೂಜಿ, ಯೋಗ ಶಿಕ್ಷಕ ಕೆ.ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.