ಶ್ರದ್ಧೆಯಿಂದ ಓದಿ ರಾಜ್ಯಕ್ಕೆ ಕೀರ್ತಿ ತನ್ನಿ
ಕ,ಪ್ರ,ವಾರ್ತೆ ಮಧುಗಿರಿ ಮೇ 2
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಶ್ರದ್ಧೆಯಿಂದ ಓದಿ ಹೆತ್ತವರಿಗೆ-ಗುರು ಹಿರಿಯರಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಟಾಗಿದ್ದ ಕಾಲೇಜು ವಾರ್ಷಿಕೋತ್ಸವ ಮತ್ತು 2013-14 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್, ಗೈಡ್ಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಸುಂದರವಾದುದು. ಅದನ್ನು ಹಾಳು ಮಾಡಿಕೊಳ್ಳದೇ ಕಷ್ಟಪಟ್ಟು ಗುಣ ಮಟ್ಟದ ಶಿಕ್ಷಣ ಕಲಿಯುವ ನಿಟ್ಟಿನಲ್ಲಿ ಜ್ಞಾನ ಸಂಪಾದನೆಗೆ ಅಧಿಕ ಒತ್ತು ಕೊಟ್ಟು ಸಮಾಜಕ್ಕೆ ಉತ್ತಮ ಆಸ್ತಿಯಾಗಿ ಪರಿವರ್ತನೆಯಾದಾಗ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಯಾರಿಗೂ
ಏನೂ ಕಮ್ಮಿ ಇಲ್ಲ ಎಂಬುದನ್ನು ಅರಿತು ಹೆತ್ತವರ ಆಸೆ ಆಕಾಂಕ್ಷೆ ಈಡೇರಿಸುವ ಜತೆಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಪರಿಶ್ರಮಕ್ಕೆ ಸರ್ಕಾರ, ಪೋಷಕರು ಹಾಗೂ ಜನಪ್ರತಿನಿಧಿಗಳು ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.
ತುಮಕೂರು ವಿವಿ ಉಪಕುಲಪತಿ ಪ್ರೊ.ರಾಜಾಸಾಬ್ ಪ್ರಪಂಚದ ಬಹುತೇಕ ಎಲ್ಲ ವಿವಿಗಳಲ್ಲಿರುವ ಸಿಬಿ, ಸಿಎಸ್ ವ್ಯವಸ್ಥೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ನಮ್ಮ ವಿವಿಯಲ್ಲೂ ಅಳವಡಿಸಲಾಗುವುದು. ನಾನು ಅಧಿಕಾರ ವಹಿಸಿಕೊಂಡ ನಂತರ ಹಲವು ಶೈಕ್ಷಣಿಕ ಮಾರ್ಪಾಟುಗಳನ್ನು ಮಾಡುವ ಮೂಲಕ ಗುಣ ಮಟ್ಟ ಹೆಚ್ಚಿಸಲು ಪ್ರಯತ್ನಿಸಿದ್ದೇನೆ. ಕಳೆದ 10 ವರ್ಷಗಳಿಂದ ಅಂಡರ್ ಗ್ರಾಜುಯೇಟನ ಸಿಲೆಬಸ್ಗಳು ಬದಲಾಗಿಲ್ಲ. ಈ ಕುರಿತು ಕಾರ್ಯಾಗಾರ ನಡೆಸಿ ಉಪನ್ಯಾಸಕರ ಜತೆ ಚರ್ಚಿಸಿ ಹೊಸ ಸಿಲೆಬಸ್ ತಯಾರಿಸಲಾಗುವುದು.
ಇದು ನಮ್ಮ ವಿವಿಯ ಒಳ್ಳೆ ಬೆಳವಣಿಗೆ, ಈಗಾಗಲೇ ಪಿಜಿ ಸಿಲೆಬಸ್ಗಳು ಬದಲಾಗಿದ್ದು ಸ್ನಾತಕೋತ್ತರ ಪದವಿಯಲ್ಲಿ ಕೇವಲ 15 ವಿಷಯಗಳಿದ್ದು ಬೇರೆ ವಿವಿಗಳಲ್ಲಿ 80ರಷ್ಟು ವಿಷಯಗಳಿಗೆವೆ. ವಿಷಯ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಹಣಕಾಸು ಇಲಾಖೆಯಿಂದಲೇ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದರೆ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರೆಯಲಿವೆ ಎಂದರು.
ಹೊಸದುರ್ಗ ತಾಲೂಕು ಬ್ರಹ್ಮ ವಿದ್ಯಾನಗರ ಭಗೀರಥ ಪೀಠದ ಯುಗಧರ್ಮ ರಾಮಣ್ಣ ಮಾತನಾಡಿದರು.ಪ್ರಾಂಶುಪಾಲ ಪ್ರೊ.ರೇಣುಕರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ, ಪುರಸಭೆ ಸದಸ್ಯ ಎಂ.ಪಿ. ಗಣೇಶ್, ಅಯೂಬ್, ಅಲೀಮ್, ಸಾಧಿಕ್, ಭಾರತಮ್ಮ, ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸಿದ್ಧಗಂಗಪ್ಪ ಉಪಸ್ಥಿತರಿದ್ದರು.