ನೋವಿನ ನೆಲೆಯೇ ಸ್ತ್ರೀ, ದಲಿತ ಸಾಹಿತ್ಯದ ಕೇಂದ್ರ
ಕನ್ನಡಪ್ರಭ ವಾರ್ತೆ, ತುಮಕೂರು, ಮೇ 4
ಸ್ತ್ರೀ, ದಲಿತ ಸಾಹಿತ್ಯದ ಕೇಂದ್ರ ಬಿಂದು ನೋವು. ಸ್ತ್ರೀ ಹಾಗೂ ದಲಿತ ಇಬ್ಬರೂ ತಮ್ಮ- ತಮ್ಮ ನೋವನ್ನು ಪರಸ್ಪರರಷ್ಟೇ ಹಂಚಿಕೊಳ್ಳುವ, ಮಾತನಾಡುವ ದುಃಸ್ಥಿತಿ ಇಂದಿಗೂ ಇರುವುದು ವಿಷಾದನೀಯ ಎಂದು ಲೇಖಕಿ ಪ್ರೊ. ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಯುವ ಕವಿ ಗುರುಪ್ರಸಾದ್ ಕಂಟಲಗೆರೆಯವರ ಕಪ್ಪು ಕೋಣಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಎಲ್ಲ ಭಾಷೆಯಲ್ಲೂ ಬರುತ್ತಿರುವ ಸ್ತ್ರೀ, ದಲಿತ ಸಾಹಿತ್ಯದ ಕೇಂದ್ರ ಬಿಂದು, ಮುಖ್ಯ ವಸ್ತು ನೋವೇ ಆಗಿದೆ. ಲಿಂಗ ತಾರತಮ್ಯ, ಜಾತಿ ತಾರತಮ್ಯ ಅಸಮಾನತೆಯ ನೆಲೆ ಭದ್ರವಾಗಿ ಬೇರೂರಿದ್ದರಿಂದ, ಈ ನೋವನ್ನು ಬಿಟ್ಟು, ಬೇರೊಂದನ್ನು ಬರೆಯುವಂತೆ ಕೇಳಿ ಕೊಳ್ಳಲಾಗದು ಎಂದ ತಾರಿಣಿ ಶುಭದಾಯಿನಿ, ರಸಾನುಭೂತಿ ಪ್ರಶ್ನೆ ಇಲ್ಲಿ ಎರಡನೆಯದ್ದಾಗಿದೆ ಎಂದರು. ಸ್ತ್ರೀ, ದಲಿತರ ಕುರಿತಂತೆ ಪರಸ್ಪರರಷ್ಟೇ ಮಾತನಾಡಿಕೊಳ್ಳುವ ಕೆಟ್ಟ ಪರಂಪರೆ, ಇವರಿಬ್ಬರ ಕುರಿತಂತೆ ಸಮಾಜದಲ್ಲಿ ನಕಾರಾತ್ಮಕ ಧೋರಣೆ ಇಂದಿಗೂ ಮುಂದುವರೆದಿರುವುದು ಸರಿಯಲ್ಲ ಎಂದರು.
ಎಚ್ಚರ ಅಗತ್ಯ: ಸ್ತ್ರೀ ಹಾಗೂ ದಲಿತ ಎರಡನ್ನು ಒಟ್ಟಿಗೇ, ಸಮಾನವಾಗಿ ತೆಗೆದುಕೊಂಡು ಹೋಗಲು ಇಷ್ಟಪಡುವುದಾಗಿ ತಿಳಿಸಿದರು. ಬಂಡವಾಳಶಾಹಿ, ಜಾಗತೀಕರಣದ ಸನ್ನಿವೇಶದಲ್ಲಿ ಅರಿವಿನ ಪಲ್ಲಟವಾಗುತ್ತಿದ್ದು, ಹೊಸ ಶೋಷಣೆ ಜಗತ್ತಿಗೆ ತೆರೆದುಕೊಂಡಿದ್ದು, ಹೊಸ ಪಾಲುದಾರಿಕೆಯ ಬಗ್ಗೆ, ನಾಜೂಕಾಗಿ, ನೋವಾಗದಂತೆ, ಅರಿವಿಗೆ ಬಾರದಂತೆ ಕತ್ತು ಕೊಯ್ಯುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮೊದಲ ತಲೆಮಾರಿನ ದಲಿತರ ಸಂಕಟ, ಮುಜುಗರ ಈಗಿನ ತಲೆಮಾರಿಗಿಲ್ಲ. ಇಂತದ ಸಂದರ್ಭದಲ್ಲಿ ಕಾವ್ಯರಚನೆಯಲ್ಲಿ ತೊಡಗಿರುವ ಗುರುಪ್ರಸಾದ್ ಕಂಟಲಗೆರೆ ತಮ್ಮ ನೋವಿನ ನೆಲೆಯನ್ನು ಕವನಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದು, ಇಂದು ಸಾಹಿತ್ಯ ರಚನೆಗೆ ಹೊಸ ಉಪಕರಣಗಳು ತುರ್ತಾಗಿ ಬೇಕಾಗಿವೆ ಎಂದು ತಿಳಿಸಿದರು.
ದಿನ ನಿತ್ಯ ಒಣ ಮಾತುಗಳ ಪ್ರದರ್ಶನ: ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಮಂಜುನಾಥ್ ಅದ್ದೆ ಮಾತನಾಡಿ, ಪ್ರಾಣಿ-ಪಕ್ಷಿಗಳು ನೈಸರ್ಗಿಕ ಅಗತ್ಯಕ್ಕೆ ತಕ್ಕಂತೆ, ಕೆಲ ಕಾಲ ಕ್ರೂರವಾಗಿ ವರ್ತಿಸುವುದುಂಟು. ಆದರೆ ಮನುಷ್ಯ ಅನಗತ್ಯವಾಗಿ ದಿನನಿತ್ಯ ಕ್ರೂರತ್ವ ಪ್ರದರ್ಶಿಸುತ್ತಲೇ ಇದ್ದಾನೆ ಎಂದು ವಿಷಾದಿಸಿದರು.
ಸಾಮಾಜಿಕ ಪ್ರತಿಷ್ಠೆಗಾಗಿ ಒಣ ಮಾತುಗಳ ಪ್ರದರ್ಶನ ಇಂದಿಗೂ ನಡೆದಿದೆ. ಟೀಕೆ, ವಿಷಾದ ದಿನನಿತ್ಯದ ಭಜನೆಯಾಗಿ ಹೋಗಿದ್ದು, ಇವುಗಳಲ್ಲೇ ಕಳೆದು ಹೋಗುತ್ತಿದ್ದು, ಹೊಸ ಸಂಗತಿಗಳ ಬಗ್ಗೆ ಮಾತನಾಡುತ್ತಿಲ್ಲ.
ಆರ್ಥಿಕ ಚಟುವಟಿಕೆಗಳಿಗೆ ತೆರೆದುಕೊಳ್ಳದ, ಕೇಂದ್ರೀಕರಿಸಿಕೊಳ್ಳದ ಪರಿಣಾಮ ಚಳವಳಿಗಳು ನಿಸ್ತೇಜಗೊಂಡವು. ಆರ್ಥಿಕ ಚಟುವಟಿಕೆಯಿಲ್ಲದೆ ಕ್ರಿಯೇಟಿವಿಟಿ ಉಳಿಯಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕೃತಿ ಕುರಿತು ವಿಮರ್ಶಕ ಡಾ. ರವಿಕುಮಾರ್ ನೀಹ, ಚಿಂತಕ ಕೆ. ದೊರೈರಾಜ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಕೃತಿಕಾರ ಗುರುಪ್ರಸಾದ್ ಕಂಟಲಗೆರೆ, ಸಣ್ಣ ಹೊನ್ನಯ್ಯ ಕಂಟಲಗೆರೆ, ವಿಮರ್ಶಕ ಕೆ.ಪಿ. ನಟರಾಜ್ ಇತರರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಕೊಟ್ಟ ಶಂಕರ್ ಕಾರ್ಯಕ್ರಮ ನಿರೂಪಿಸಿದರು.