ಬೆಸ್ಕಾಂ ನೌಕರರ ಬಗ್ಗೆ ಅವಹೇಳನಕಾರಿ ಹೇಳಿಕೆ: ಪ್ರತಿಭಟನೆ
ಗುಬ್ಬಿ: ಕೋಲಾರದಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಅವರು ಬೆಸ್ಕಾಂ ನೌಕರರನ್ನು ಕಂಬಕ್ಕೆ ಕಟ್ಟಿಹಾಕಿ ಮೂರು ದಿನ ಅನ್ನ, ನೀರು ನೀಡಬೇಡಿ ಎಂದು ಬೆಸ್ಕಾಂ ನೌಕರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಬೆಸ್ಕಾಂ ಎಇಇ ಸಯ್ಯದ್ ಅಹಮದ್ ತಿಳಿಸಿದರು.
ಗುಬ್ಬಿ ಬೆಸ್ಕಾಂ ಕಚೇರಿ ಮುಂದೆ ಕೆ.ಪಿ.ಟಿ.ಸಿ.ಎಲ್ ಫೆಡರೇಷನ್ ಕರೆ ನೀಡಿದ ಮೇರೆಗೆ ತಾಲೂಕಿನ ಬೆಸ್ಕಾಂ ನೌಕರರು ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಡಿಮೆ ಪ್ರಮಾಣದಲ್ಲಿರುವ ಸಿಬ್ಬಂದಿಯಿಂದಲೇ ಹಗಲು ರಾತ್ರಿ ಎನ್ನದೆ ಎಂತಹ ಕಠಿಣ ಸಂದರ್ಭದಲ್ಲೂ ಜೀವದ ಹಂಗನ್ನು ತೊರೆದು ಕೆಲಸ ನಿರ್ವಹಿಸುವ ಬೆಸ್ಕಾಂ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಎಂದು ಅಸಂಬದ್ಧವಾದ ಹೇಳಿಕೆ ನೀಡಿರುವುದು ಇಡೀ ಬೆಸ್ಕಾಂ ನೌಕರರಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚೇಳೂರು ಬೆಸ್ಕಾಂ ಎಸ್‌ಓ ದೊಡ್ಡೇಗೌಡ ಮಾತನಾಡಿ ಮುಂಬರುವ ದಿನಗಳಲ್ಲಿ ಯಾವುದೇ ಶಾಸಕರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಬೆಸ್ಕಾಂ ನೌಕರರ ಮೇಲೆ ಅನಗತ್ಯವಾದ ಹೇಳಿಕೆಗಳನ್ನು ನೀಡಿದರೆ ರಜೆ ಹಾಕಿ ವಿದ್ಯುತ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಶಾಸಕರ ಹೇಳಿಕೆ ನಿಷ್ಠಾವಂತ ಬೆಸ್ಕಾಂ ನೌಕರರರಿಗೆ ಬೇಸರ ತರುವಂತಹದ್ದಾಗಿದೆ ಎಂದ ಅವರು ಹಗಲಿರುಳು ಸಾರ್ವಜನಿಕರ ಸೇವೆಯಲ್ಲಿರುವ ಬೆಸ್ಕಾಂ ನೌಕರರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಬೆಸ್ಕಾಂ ಸಿಬ್ಬಂದಿಗಳು ತಹಸೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೆದಾರ್ ರಾಮ್‌ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಾಂಕೇತಿಕ ಪ್ರತಿಭಟನೆಯಲ್ಲಿ ಬೆಸ್ಕಾಂ ನೌಕರರಾದ ಹನುಮಂತಪ್ಪ, ಗಂಗಾಧರ್, ಗೀತಾಂಜಲಿ, ಪದ್ಮ, ಕಾಂತರಾಜು, ರವಿ ಮುಂತಾದವರು ಭಾಗವಹಿಸಿ ಮಾತನಾಡಿದರು.