ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ಷರವೇ ಅರಿವಿನ ಸಾಧನ: ಹುಣಸವಾಡಿ ರಾಜನ್

Vishwanath S
Updated On : 7 May 2014, 12:09 pm

ತುಮಕೂರು:  ಅಕ್ಷರವೇ ಅರಿವಿನ ಸಾಧನ, ಈ ಅಕ್ಷರಗಳ ಮೂಲಕ ಮಾಧ್ಯಮಗಳು ಸಮಾಜದಲ್ಲಿನ ವೈಚಾರಿಕತೆಯನ್ನು ಎತ್ತಿಹಿಡಿದು ಉತ್ತಮ ಸಮಾಜವನ್ನು ಕಟ್ಟುವ ಕೆಲಸಗಳನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮೋತ್ಸವ ಸಂಭ್ರಮ-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಣ್ಣಿಗೆ ಕಂಡಿದ್ದನ್ನು ವೈಚಾರಿಕವಾಗಿ ಮತ್ತು ಆಳವಾಗಿ ತಿಳಿದುಕೊಳ್ಳುವುದು ಮಾಧ್ಯಮಗಳ ಮುಖ್ಯ ಕರ್ತವ್ಯ, ಆದರೆ ಪ್ರಸ್ತುತ ದಿನಗಳಲ್ಲಿ ಜವಾಬ್ದಾರಿ ಮತ್ತು ಕರ್ತವ್ಯಗಳು ನಿಘಂಟಿನ ಅರ್ಥ ಕಳೆದುಕೊಂಡು
ಅರ್ಥ ಹೀನವಾಗಿವೆ. ಇವುಗಳ ನಡುವೆ ಮಾಧ್ಯಮಗಳು ಕೆಲಸ ನಿರ್ವಹಿಸುವುದು ಒನ್ ವೇ ಟ್ರಾಫಿಕ್‌ನಂತಾಗಿದೆ ಎಂದು ತಿಳಿಸಿದ ಅವರು ನವ ಮಾಧ್ಯಮಗಳು ದಿನೇ ದಿನೇ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಮಾಧ್ಯಮ ಕ್ಷೇತ್ರ ತುಂಬಾ ವಿಶಾಲವಾದ್ದದು, ಈ ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಮುನ್ನಡೆಯಲು ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಂಸ್ಥೆಯ ಸಂಯೋಜನಾಧಿಕಾರಿ ಡಾ.ವೈ.ಎಂ.ರೆಡ್ಡಿ, ಮಾಧ್ಯಮಗಳು ನೈಜತೆಯನ್ನು ಸಮಾಜದ ಮುಂದೆ ತೆರೆದಿಡಬೇಕು ಹೊರತು ಇಲ್ಲಸಲ್ಲದ ಹೊಗಳಿಕೆ, ತೆಗಳಿಕೆ, ವೈಭವೀಕರಣ ಮಾಡುವುದನ್ನು ಬಿಡಬೇಕು ಎಂದರು. ಉತ್ತಮ ಪತ್ರಕರ್ತರಾಗಿ ನವ ಸಮಾಜದ ನಿರ್ಮಾತೃಗಳಾಗಬೇಕು ಎಂದು ಮಾಧ್ಯಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಶ್ರೀ ಸಿದ್ಧಾರ್ಥ  ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಸಂಯೋಜಕ ಅಜಮತುಲ್ಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಾಧ್ಯಾಪಕ ಡಾ. ಯು.ಡಿ. ನಾಗೇಂದ್ರ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು, ಭಾನುಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿದರೆ, ದತ್ತಾತ್ರೇಯ ಪಾಟೀಲ್ ವಂದಿಸಿದರು. ಮಂಜುನಾಥ್ ಮತ್ತು ರಮ್ಯಶ್ರೀ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement