ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಾರಸುದಾರರಿಗೆ ಕಳವಾದ ವಸ್ತು ವಿತರಣೆ
ಕ.ಪ್ರ.ವಾರ್ತೆ, ತುಮಕೂರು, ಮೇ 6
ವಿವಿಧ ಪ್ರಕರಣಗಳಲ್ಲಿ ಕಳುವಾಗಿದ್ದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಪೊಲೀಸರು ಸೋಮವಾರ ಆ ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದರು.
Ú ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭಧಲ್ಲಿ ಕೇಂದ್ರ ವಲಯ ಐಜಿಪಿ ಸೈಯದ್ ಉಲ್ಫತ್ ಹುಸೇನ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಎಎಸ್ಪಿ ಲಕ್ಷ್ಮಣ್ ಸಮ್ಮುಖದಲ್ಲಿ ವಾರಸುದಾರರಿಗೆ ವಿತರಿಸಿದರು. ತುಮಕೂರಿನ ಅಶೋಕ ನಗರದ ವಾಸಿ ಪಿ.ಆರ್. ಕಲ್ಪನ ಮನೆಯಲ್ಲಿ ದರೋಡೆಯಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಅವರಿಂದ ಹಿಂಪಡೆದ ವಸ್ತುಗಳನ್ನು ಕಲ್ಪನಾ ಅವರಿಗೆ ಹಿಂತಿರುಗಿಸಲಾಯಿತು. 1 ಲಕ್ಷ 20 ಸಾವಿರ ರು. ಬೆಲೆ ಬಾಳುವ 55 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಿಂತಿರುಗಿಸಿದರು.
ಹಾಗೆಯೇ ಕಂಬದಹಳ್ಳಿಯ ನಿವೃತ್ತ ಶಿಕ್ಷಕ ಕೆ.ಟಿ. ಬಸವರಾಜ್ ಅವರ ಮನೆಯಲ್ಲಿ ಕಳುವಾಗಿದ್ದ 48 ಗ್ರಾಂ ಚಿನ್ನದ ಒಡವೆ ಹಾಗೂ ಕೆ.ಜಿ. ಹಳ್ಳಿಯ ಕಸಿನಾಯಕನಹಳ್ಳಿಯ ಪಾರ್ವತಮ್ಮ ಅವರಿಗೆ 29 ಗ್ರಾಂ ಚಿನ್ನದ ಒಡವೆ, 600 ಗ್ರಾಂ ಬೆಳ್ಳಿ ವಸ್ತುಗಳನ್ನು ಸಹ ವಿತರಿಸಲಾಯಿತು.
80 ಲಕ್ಷ ವಸೂಲಿ: ಬಳಿಕ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಮಟ್ಕಾ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈವರೆಗೆ 80 ಲಕ್ಷ ರು. ವಸೂಲಾತಿ ಮಾಡಲಾಗಿದೆ. ಎಂದು ಮಾಹಿತಿ ನೀಡಿದರು. ಹಲವು ಪ್ರಕರಣಗಳನ್ನು ಬೇಧಿಸಿದ ತುಮಕೂರು ಪೊಲೀಸರಿಗೆ ಕೇಂದ್ರ ವಲಯ ಐಜಿಪಿ ಶಹಬಾಸ್ಗಿರಿ ನೀಡಿದರು. ಬಳಿಕ ಮಾತನಾಡಿದ ಎಸ್ಪಿ ರಮಣಗುಪ್ತ ಅವರು 84 ಪೊಲೀಸ್ ಕ್ವಾರ್ಟಸ್ ನಿರ್ಮಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಒಟ್ಟು 256 ಪೊಲೀಸ್ ಕ್ವಾರ್ಟಸ್ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಬಹುತೇಕ ಪೊಲೀಸ್ ಕ್ವಾರ್ಟಸ್ಗಳು ಸಮರ್ಪಕವಾಗಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಹಾಗೆಯೇ ಟ್ರಾಫಿಕ್ ಪೊಲೀಸ್ ಸ್ಟೇಷನ್ ಅನ್ನು ಕೂಡ ನವೀಕರಿಸಲಾಗುತ್ತಿದೆ. ಜತೆಗೆ ತಿಲಕ್ ಪಾರ್ಕ್ ಠಾಣೆಯನ್ನು ದುರಸ್ಥಿ ಮಾಡಲಾಗುವುದು ಎಂದರು.
ಎರಡು ಕಡೆ ಹೊಸ ಸ್ಟೇಷನ್: ತುಮಕೂರು ಜಿಲ್ಲೆಯಲ್ಲಿ ಎರಡು ಹೊಸ ಪೊಲೀಸ್ ಸ್ಟೇಷನ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಮಕೂರಿನ ಜಯನಗರ ಮತ್ತು ಕೊರಟಗೆರೆ ತಾಲೂಕು ಕೋಳಾಲದಲ್ಲಿ ಹೊಸ ಪೊಲೀಸ್ ಸ್ಟೇಷನ್ ಸ್ಥಾಪಿಸುವ ಇರಾದೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಧುಗಿರಿ ಜಿಲ್ಲೆ ಬಡವನಹಳ್ಳಿಯಲ್ಲಿ ಠಾಣೆ ನಿರ್ಮಿಸಲಾಗುತ್ತಿದೆ ಎಂದರು.