ಸಾರಿಗೆ ದರ ಹೆಚ್ಚಳ: ಸಿಪಿಎಂ ಪ್ರತಿಭಟನೆ
ತುಮಕೂರು: ಚುನಾವಣೆಗಳು ಮುಗಿದ ಬೆನ್ನಲ್ಲೆ ರಾಜ್ಯದ ಕಾಂಗ್ರೆಸ್ ಸರ್ಕಾರ, ಕೆ.ಎಸ್.ಆರ್.ಟಿ.ಸಿ. ಪ್ರಯಾಣದರ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಬರೆ ಎಳೆದಿದೆ. ಈ ದರ ಏರಿಕೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಸಾರಿಗೆ ಕಾರ್ಮಿಕ ತುಟ್ಟಿಭತ್ಯೆ ನೀಡಲು ದರ ಏರಿಸಲಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸಾರಿಗೆ ನೌಕರರಿಗೆ ಕಳೆದ ವರ್ಷ ತುಟಿಭತ್ಯೆ ನೀಡಿಲ್ಲ. ಅಲ್ಲದೆ ಕೇಂದ್ರ ಕಾಂಗ್ರೆಸ್ ಸರ್ಕಾರ ಡೀಸಲ್ ದರ ಪ್ರತಿ ತಿಂಗಳು ಹೆಚ್ಚಳ ಮಾಡುವ ಜನ ವಿರೋಧಿ ನೀತಿಗಳ ಬಗ್ಗೆ ಮಾತನಾಡದೆ ಇರುವುದು ಏಕೆಂದು ಸಿಪಿಎಂ ಪ್ರಶ್ನಿಸಿದೆ.
ಜನರ ಮೂಲಭೂತ ಅಗತ್ಯತೆಗಳನ್ನು ಒಂದಾದ ಸಾರಿಗೆಯ ರಂಗವನ್ನು ರಾಜ್ಯ ಸರ್ಕಾರ ಉದ್ಯಮವಾಗಿಸಿದೆ. ಸರ್ಕಾರ ಶೀಘ್ರದಲ್ಲಿ ಈ ದರ ಏರಿಕೆ ಹಿಂದಕ್ಕೆ ಪಡೆಯದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಈ ಪ್ರತಿಭಟನೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ, ಎಸ್.ಎಫ್.ಐ ಮುಖಂಡ ದರ್ಶನ್, ಡಿ.ವೈ.ಎಫ್.ಐ ಜಿಲ್ಲಾ ಅಧ್ಯಕ್ಷ ರಾಘವೇಂದ್ರ, ಸಮುದಾಯದ ಆರ್. ಸುರೇಂದ್ರ ಮುಂದಾಳತ್ವ ವಹಿಸಿದ್ದರು.
ತುಮಕೂರಿನಲ್ಲಿ ವಿಜೃಂಭಣೆ ಆಚಾರ್ಯತ್ರಯರ ಶೋಭಾಯಾತ್ರೆ
ತುಮಕೂರು: ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಶಂಕರ ಭಗವತ್ಪಾದರ ಜಯಂತಿ ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮಗಳು ಧಾರ್ಮಿಕ ಸಂಪ್ರದಾಯದಂತೆ ವಿಜೃಂಭಣೆಯಿಂದ ನೆರವೇರಿತು.
ಅದೇ ದಿನ ಸಂಜೆ ಶ್ರೀ ಶಂಕರ, ಶ್ರೀ ರಾಮಾನುಜ ಮತ್ತು ಶ್ರೀ ಮಧ್ವಾಚಾರ್ಯರ ಭಾವಚಿತ್ರಗಳೊಂದಿಗೆ ಹೊರಟ ಶೋಭಾಯಾತ್ರೆಯನ್ನು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಸಿ.ವಿ. ಶ್ರೀನಿವಾಸಮೂರ್ತಿ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ, ಮಹಾನಗರ ಪಾಲಿಕೆಯ ಸದಸ್ಯ ಎನ್.ಆರ್. ನಾಗರಾಜರಾವ್, ಉಪಾಧ್ಯಕ್ಷರಾದ ಸಿ.ಎನ್. ರಮೇಶ್, ಸುಭಾಷಿಣಿ ರವೀಶ್ ಮತ್ತು ಫಣೀಶ್ ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು.
ಶೋಭಾಯಾತ್ರೆಯು ಶ್ರೀ ಶಂಕರಮಠದಿಂದ ಪ್ರಾರಂಭವಾಗಿ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಕೆ.ಆರ್. ಬಡಾವಣೆಯ ಮುಖ್ಯರಸ್ತೆಯ ಮೂಲಕ ಸಾಗಿ ಬಿ.ಹೆಚ್. ರಸ್ತೆ ಮೂಲಕ ಶಂಕರಮಠಕ್ಕೆ ಬಂದು ಸೇರಿತು. ನೂರಾರು ಋತ್ವಿಜರು, ರುದ್ರ, ಚಮಕ, ನಮಕ, ಮಹಾನ್ಯಾಸಗಳೊಂದಿಗೆ, ವೇದಘೋಷ ಪಠಿಸಿದರು. ವಿವಿಧ ವಿಪ್ರ ಮಹಿಳಾ ಮಂಡಳಿಗಳವರು ಲಲಿತಾ ಸಹಸ್ರನಾಮ ವಿಷ್ಣುಸಹಸ್ರನಾಮ, ಸೌಂದರ್ಯಲಹರಿ, ಶಿವಾನಂದ ಲಹರಿಗಳನ್ನು ಸುಶ್ರಾವ್ಯವಾಗಿ ಪಠಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ವಿಪ್ರ ಮುಖಂಡರಾದ ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಸಂಪಿಗೆ ವೆಂಕಟನಾರಾಯಣ, ಕೆ. ನರಸಿಂಹಮೂರ್ತಿ, ಶ್ರೀನಿವಾಸ ಜೋಯಿಸ್, ಆರ್.ಎನ್. ಸತ್ಯನಾರಾಯಣ, ಎಂ.ಕೆ. ನಾಗರಾಜರಾವ್, ಕಲ್ಲೂರು ಸುಬ್ಬಣ್ಣ, ಚಿದಂಬರ ಜೋಷಿ, ಎನ್. ಸತ್ಯನಾರಾಯಣ, ಹೆಚ್.ಕೆ. ರಮೇಶ್, ಸಹಸ್ರಾರು ವಿಪ್ರ ಬಾಂಧವರು ಹಾಜರಿದ್ದು ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿದರು.
ಹುಟ್ಟು ಹಬ್ಬ ಅದ್ಧೂರಿ ಬೇಡ: ಸಚಿವ ಡಿಕೆಶಿ ಮನವಿ
ರಾಮನಗರ: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆ ಬೇಡವೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮೇ 15ರಂದು ಶಿವಕುಮಾರ್ ಅವರ ಹುಟ್ಟುಹಬ್ಬವಿದೆ. ಯಾವುದೇ ಕಾರಣಕ್ಕೂ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಕೆ, ಸಂಭ್ರಮಾಚರಣೆ ಬೇಡ. ಅಂದು ತಾವು ಹೊರ ರಾಜ್ಯದ ದೇಗುಲಗಳಿಗೆ ತೆರಳಲಿದ್ದು, ಶುಭ ಕೋರುವುದಕ್ಕಾಗಿ ಹುಡುಕಿಕೊಂಡು ಬೆಂಗಳೂರಿಗೂ ಬರುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಸಮುದಾಯ ಭವನ ಪೂರ್ಣಗೊಳಿಸಲು ಮನವಿ
ಕನ್ನಡಪ್ರಭ ವಾರ್ತೆ , ಕೊರಟಗೆರೆ , ಮೇ 5
ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಶಿವಭಕ್ತ ಕಣ್ಣಪ್ಪಸ್ವಾಮಿ ಸಮುದಾಯ ಭವನ ಪೂರ್ಣಗೊಳಿಸಲು ಶಾಸಕರ ನಿಧಿಯಿಂದ ಅನುದಾನ ಕೋರಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಸುಧಾಕರಲಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸೇವಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಕಣ್ಣಪ್ಪ ದೇವಾಲಯದ ಬಳಿ 70 ಲಕ್ಷ ರು. ಅಂದಾಜಿನ ಸಮುದಾಯ ಭವನ ವಿವಿಧ ಅನುದಾನ ಮತ್ತು ಸಾರ್ವಜನಿಕರ ವಂತಿಕೆಯಿಂದ ಈಗಾಗಲೆ ಶೇ.50 ರಷ್ಟು ನಿರ್ಮಾಣಗೊಂಡಿದೆ. ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದೆ. ಹೀಗಾಗಿ ಶಾಸಕರ ಅನುದಾನದಲ್ಲಿ ಹಣ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಂ.ಆರ್. ನರಸೀಯಪ್ಪ, ಪದಾದಿಕಾರಿಗಳಾದ ಎಲ್.ಐ.ಸಿ.ದಿವಾಕರ್, ನಾಗರಾಜು, ಅಶ್ವತ್, ಗಣೇಶ್, ಸತ್ಯನಾರಾಯಣ್, ಲಕ್ಷ್ಮೀನಾರಾಯಣ್, ಶಿವಣ್ಣ ಸೇರಿದಂತೆ ಇನ್ನಿತರ ಪದಾದಿಕಾರಿಗಳು ಹಾಗೂ ಜನಾಂಗದ ಮುಖಂಡರು ಹಾಜರಿದ್ದರು.
ಹಬ್ಬದೋಪಾದಿಯಲ್ಲಿ ದುರ್ಗಮ್ಮನ ಬಾನ ಆಚರಣೆ
ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ 44ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಆರತಿಬಾನ ಹಾಗೂ ಎಡೆಸೇವೆ ಕಾರ್ಯವನ್ನು ಪಟ್ಟಣದ ಪ್ರತಿ ಮನೆಮನೆಗಳಲ್ಲಿಯೂ ಹಬ್ಬದೋಪಾದಿಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬಾನ ಕಾರ್ಯದ ಅಂಗವಾಗಿ ಹುಳಿಯಾರು, ಕೇಶವಾಪುರ, ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯ ಸೇರಿದಂತೆ ಸುತ್ತಮುತ್ತಲ ಮನೆಗಳಲ್ಲಿ ಮಹಿಳೆಯರು ಮಡಿಯಿಂದ ತಂಬಿಟ್ಟಿನ ಆರತಿ ಹಾಗೂ ನೈವೇದ್ಯವನ್ನು ಸಿದ್ಧ ಮಾಡಿಕೊಂಡು ದೇವಾಲಯದಲ್ಲಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿ ನಂತರ ತಾವು ತಂದಿದ್ದ ನೈವೇದ್ಯವನ್ನು ದೇವಿಗೆ ಸಮರ್ಪಿಸಿ, ಆರತಿ ಮಾಡಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಾನದ ಆಚರಣೆಯನ್ನು ಹಬ್ಬದಂತೆ ಆಚರಿಸುವ ಮತ್ತೊಂದು ವರ್ಗದ ಜನರು ತಮ್ಮ ಹರಕೆಯಂತೆ ಕುರಿ, ಕೋಳಿ, ಮೇಕೆಯನ್ನು ದೇವಿಗೆ ಬಲಿಕೊಟ್ಟು ಪೂಜೆ ಸಲ್ಲಿಸಿದ ನಂತರ ಅದರ ಅಡುಗೆ ಮಾಡಿ ಅಕ್ಕಪಕ್ಕದ ಊರುಗಳಿಂದ ಬಂದ ನೆಂಟರು, ಸ್ನೇಹಿತರಿಗೆ ಉಣಬಡಿಸಿ ಸಂಭ್ರಮಿಸಿದರು.
ಬಾನದ ದಿನದಿಂದ ಜಾತ್ರೆ ಕಳೆಗಟ್ಟುತ್ತದೆ ಎಂಬ ವಾಡಿಕೆಯಂತೆ ಮಂಗಳವಾರವೇ ಪಟ್ಟಣದ ಮನೆಗಳಿಗೆ ದೂರದೂರುಗಳಿಂದ ನೆಂಟರು, ಸ್ನೇಹಿತರು ಬಂದಿದ್ದು, ದೇವಾಲಯದ ಆವರಣದಲ್ಲಿ ಐಸ್‌ಕ್ರೀಮ್, ಆಟಿಕೆಗಳ ಅಂಗಡಿ, ಬಳೆ ಅಂಗಡಿ ಇದ್ದವು.