ಚಿಕ್ಕತೊಟ್ಲುಕೆರೆ, ಕೆಸ್ತೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ
ತುಮಕೂರು: ಚಿಕ್ಕತೊಟ್ಲುಕೆರೆ ಹಾಗೂ ಕೆಸ್ತೂರು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಯಲ್ಲಾಪುರದ ತೋವಿನಕೆರೆ ತಿರುವಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ತೋವಿನಕೆರೆ ವ್ಯಾವಹಾರಿಕ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಅಡಕೆ, ತೆಂಗು ಮಾರುಕಟ್ಟೆಯಿದ್ದು, ನಿತ್ಯ ಹೂ ತುಮಕೂರು ಮಾರುಕಟ್ಟೆಗೆ ಬರುತ್ತದೆ. ಆದರೆ ತೋವಿನಕೆರೆ ತಲುಪಲು ಇರುವಂತಹ ಎರಡು ಪ್ರಮುಖ ರಸ್ತೆ ಮಾರ್ಗಗಳು ಸಂಪೂರ್ಣ ಹದಗೆಟ್ಟಿದ್ದು, 20 ವರ್ಷಗಳಿಂದ ಹಾಗೆಯೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಿಂದ ಚಿಕ್ಕತೊಟ್ಲುಕೆರೆ ದಾಸಾಲುಕುಂಟೆ ಮಾರ್ಗದಲ್ಲಿ ಸುಮಾರು 50 ಹಳ್ಳಗಳು ಮತ್ತು ಊರುಕೆರೆ ಕೆಸ್ತೂರು ಮೂಲಕ ತೋವಿನಕೆರೆ ಮಾರ್ಗದಲ್ಲಿ ಸುಮಾರು 50 ಕ್ಕಿಂತಲೂ ಹಳ್ಳಿಗಳು ಇದು ಪ್ರತಿನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಈ ಮಾರ್ಗವು ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಕೋರಾ ಹಾಗೂ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಗೆ ಬರುತ್ತದೆ. ಕಳೆದ 20 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಅಥವಾ ಸರ್ಕಾರ ಈ ಕುರಿತು ಸ್ಪಂದಿಸಿಲ್ಲ ಎಂದು ದೂರಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಟಿ.ಎಂ. ಮಹೇಶ್ಕುಮಾರ್, ಯಲ್ಲಾಪುರ ಅಧ್ಯಕ್ಷರಾದ ರಾಜಣ್ಣ, ತೊಟ್ಲುಕೆರೆಯ ಗಿರೀಶ್, ಕೋರಾ ಹೋಬಳಿಯ ಸುರೇಶ್, ಬುರುಡುಗುಡ್ಡದ ರುದ್ರೇಶ್, ಶಿರಾಗೇಟ್ನ ಅತೀಶ್, ಚೌಡಪ್ಪ, ಹೇಮಂತ್ ವಹಿಸಿದ್ದರು.
ಎಂಕಾಂ ಪರೀಕ್ಷಾ ಕೇಂದ್ರ ಪ್ರಾರಂಭಿಸಲು ಎಬಿವಿಪಿ ಆಗ್ರಹ
ತಿಪಟೂರು: ತಿಪಟೂರಿನಲ್ಲಿ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಪಟೂರಿನಲ್ಲಿಯೇ ಎಂಕಾಂ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಬಿ. ಮಂಜುನಾಥ್ ಆಗ್ರಹಿಸಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ 40 ವಿದ್ಯಾರ್ಥಿಗಳು ಹಾಗೂ ದ್ವಿತೀಯ ವರ್ಷದಲ್ಲಿ 35 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಅರಸೀಕೆರೆ ಸೇರಿದಂತೆ ದೂರದ ಹಳ್ಳಿಗಳಿಂದ ಆಗಮಿಸುತ್ತಿದ್ದಾರೆ. ಪರೀಕ್ಷಾ ಸಮಯದಲ್ಲಿ ತುಮಕೂರಿಗೆ ತೆರಳಿ ಪರೀಕ್ಷೆ ಎದುರಿಸುವುದು ಕಷ್ಟಕರವಾಗಿದ್ದು, ಪ್ರತಿನಿತ್ಯ ಪ್ರಯಾಣಿಸಿ ಪರೀಕ್ಷೆ ಬರೆಯಬೇಕಾಗಿದೆ. ಪರೀಕ್ಷಾ ಸಮಯವು ಬೆಳಗ್ಗೆ 9ಗಂಟೆಗೆ ಆರಂಭವಾಗುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಆದ್ದರಿಂದ ಶೀಘ್ರವಾಗಿ ವಿಶ್ವವಿದ್ಯಾನಿಲಯವು ತಿಪಟೂರಿನಲ್ಲಿ ಎಂಕಾಂ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ.