ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲಂಚ ಪಡೆಯುತ್ತಿದ್ದಾಗಲೇ ಲೋಕಾಬಲೆಗೆ ಸರ್ವೆಯರ್

Rashmi Kasaragodu
Updated On : 8 May 2014, 1:41 am

 ಕುಣಿಗಲ್: ರೈತರೊಬ್ಬರ ಜಮೀನಿನ ದಾಖಲೆಗಳನ್ನು ಅಳೆದು, ನಕ್ಷೆಮಾಡಿಕೊಡಲು ಲಂಚಕ್ಕಾಗಿ ಪೀಡಿಸಿ, ಮಧ್ಯವರ್ತಿಯೊಬ್ಬರ ಮೂಲಕ ಲಂಚ ಪಡೆಯುತ್ತಿದ್ದ ಪರವಾನಗಿ ಹೊಂದಿದ ಖಾಸಗಿ ಸರ್ವೆಯರ್, ತಾಲೂಕು ಕಚೇರಿ ಆವರಣದಲ್ಲಿನ ಕ್ಯಾಂಟೀನ್ನಲ್ಲಿ   ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಅಮೃತೂರು ಹೋಬಳಿಯ ಜಿನ್ನಾಗರೆ ಗ್ರಾಮದ ಶ್ರೀನಿವಾಸ ಎಂಬಾತ ತನ್ನ ಜಮೀನಿನ ಎರಡು ಸರ್ವೇ ನಂಬರ್ಗಳ ಭೂಮಿಯನ್ನು ಅಳೆದು, ಸರಿಯಾದ ನಕ್ಷೆ ತಯಾರಿಸುವಂತೆ ಭೂಮಾಪನ ಇಲಾಖೆಗೆ ಅರ್ಜಿಸಲ್ಲಿಸಿ, ಇಲಾಖೆ ನಿಗದಿಪಡಿಸಿದ್ದ 6200 ರು..ಶುಲ್ಕವನ್ನು ಕಳೆದೊಂದು ವಾರದ ಕೆಳಗೆ ಪಾವತಿಸಿದ್ದರು. ಸದರಿ ಭೂಮಿಯ ಅಳೆತೆಮಾಡಿ, ನಕ್ಷೆ ತಯಾರಿಸಿಕೊಡಲು ಭೂಮಾಪನ ಇಲಾಖೆಯ ನಿಯಮಾವಳಿ ಪ್ರಕಾರ ಪರವಾನಗಿ ಹೊಂದಿದ ಖಾಸಗಿ ಸರ್ವೇಯರ್ ಸತೀಶ್ ಕುಮಾರ್ ಎಂಬುವವರಿಗೆ ಇಲಾಖೆ ಮಂಜೂರು ಮಾಡಿತ್ತು.
ಸರ್ವೇಯರ್ ಸತೀಶಕುಮಾರ್, ಭೂಮಿ ಅಳತೆ ಮಾಡಿ ನಕ್ಷೆತಯಾರಿಸಿಕೊಡಲು 6000 ರು. ಲಂಚಕ್ಕೆಬೇಡಿಕೆ ಇಟ್ಟಿದ್ದು, ಚೌಕಾಶಿ ನಡೆದು ಅಂತಿಮವಾಗಿ ಐದುಸಾವಿರ ರೂಪಾಯಿಗೆ ಒಪ್ಪಿಗೆಯಾಗಿದ್ದು, ಮುಂಗಡವಾಗಿ ಒಂದುಸಾವಿರ ನೀಡಿದ್ದು, ಪೂರ್ತಿಹಣ ನೀಡಿದ ಮೇರೆಗೆ ಭೂಮಿ ಅಳತೆ ಮಾಡಲು ಬರುವುದಾಗಿ ಸರ್ವೇಯರ್ ತಿಳಿಸಿದ್ದರಿಂದ ಬೇಸತ್ತ  ರೈತ ಶ್ರೀನಿವಾಸ , ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಮೇರೆಗೆ, ಪ್ರಕರಣದಾಖಲಿಸಿದ ತುಮಕೂರು ಲೋಕಾಯುಕ್ತ ಡಿವೈಎಸ್ಪಿ ಶ್ರೀನಿವಾಸ್, ಸಿಪಿಐ ಗಂಗಲಿಂಗಯ್ಯ ಮತ್ತು ಸಿಬ್ಬಂದಿಗಳು,ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಬೆಳಗ್ಗೆ ಹೊಂಚುಹಾಕಿ ಕುಳಿತರು.
 ಕಚೇರಿ ಪ್ರಾರಂಭದ ಸಮಯಕ್ಕೆ,ತಾಲೂಕು ಕಚೇರಿ ಆವರಣದಲ್ಲಿ, ಮಧ್ಯವರ್ತಿಯಾದ ನಟೇಶ್ ಎಂಬಾತನ ಮೂಲಕ, ಸರ್ವೇಯರ್ಗೆ ನೀಡಲೆಂದು ಲಂಚದ ಹಣ ನಾಲ್ಕು ಸಾವಿರು.ಗಳನ್ನು ಕ್ಯಾಂಟೀನ್ ಕಿಟಿಕಿಯ ಮೂಲಕ ಪಡೆದು, ಕ್ಯಾಂಟೀನ್ ಒಳಗಡೆ ಇಟ್ಟಿದ್ದರು. ನಂತರ ಸ್ಥಳಕ್ಕಾಗಮಿಸಿದ ಸರ್ವೇಯರ್ ಸತೀಶ್ ಕುಮಾರ್, ಲಂಚದ ಹಣವನ್ನು ಕೈಗೆತ್ತಿ ಕೊಂಡಾಗ, ಹೊಂಚುಹಾಕಿ ಕುಳಿತಿದ್ದ ಲೋಕಾಯುಕ್ತ ಸಿಬ್ಬಂದಿಗಳು, ಲಂಚಕೊರನನ್ನು ಬಲೆಗೆ ಕೆಡವಿ ಮುಂದಿನ ಕ್ರಮಕೈಗೊಂಡರು.
  ಪರವಾನಗಿ ಹೊಂದಿದ ಖಾಸಗಿ ಸರ್ವೇಯರ್ ಒಬ್ಬನನ್ನು ಲಂಚ ಪಡೆದ ಆರೋಪದಲ್ಲಿ ಬಂಧಿಸಿದ್ದು  ತಾಲೂಕಿನ ಇತಿಹಾಸದಲ್ಲಿ ಮೊದಲ ಪ್ರಕರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement