ರಮೇಶ್‌ಕುಮಾರ್ ಹೇಳಿಕೆ ಖಂಡನೆ
ಕೊರಟಗೆರೆ: ಶ್ರೀವಾಸಪುರ ಶಾಸಕ ರಮೇಶ್ ಕುಮಾರ್ ಅವರು ಬೆಸ್ಕಾಂ ನೌಕರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಕೊರಟಗೆರೆ ಬೆಸ್ಕಾಂ ಎಇಇ ನಾಗರಾಜು ತಿಳಿಸಿದ್ದಾರೆ.
ಕೊರಟಗೆರೆ ಬೆಸ್ಕಾಂ ಕಚೇರಿ ಮುಂದೆ ಕೆಪಿಟಿಸಿಎಲ್ ಫೆಡರೇಷನ್ ಕರೆ ನೀಡಿದ ಮೇರೆಗೆ ತಾಲೂಕಿನ ಬೆಸ್ಕಾಂ ನೌಕರರು ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಕಡಿಮೆ ಪ್ರಮಾಣದಲ್ಲಿರುವ ಸಿಬ್ಬಂದಿಯಿಂದಲೇ ಹಗಲು ರಾತ್ರಿ ಎನ್ನದೆ ಎಂತಹ ಕಠಿಣ ಸಂದರ್ಭದಲ್ಲೂ ಜೀವನದ ಹಂಗನ್ನು ತೊರೆದು ನಿಷ್ಟೆಯಿಂದ ಕೆಲಸ ನಿರ್ವಹಿಸುವ ಬೆಸ್ಕಾಂ ಸಿಬ್ಬಂದಿ ವಿರುದ್ಧ ಹೇಳಿಕೆ ನೀಡಿರುವುದು ಇಡೀ ಬೆಸ್ಕಾಂ ನೌಕರರಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಎಚ್. ಕೃಷ್ಣಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ಯಾವುದೇ ಶಾಸಕರಾಗಲಿ ಅಧವಾ ಜನಪ್ರತಿನಿಧಿಗಳಾಗಲಿ ಬೆಸ್ಕಾಂ ನೌಕರರ ಮೇಲೆ ಅನಗತ್ಯವಾದ ಹೇಳಿಕೆಗಳನ್ನು ನೀಡಿದರೆ ರಜೆ ಹಾಕಿ ವಿದ್ಯುತ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕರ ಹೇಳಿಕೆ ನಿಷ್ಠಾವಂತ ಬೆಸ್ಕಾಂ ನೌಕರರಿಗೆ ಬೇಸರ ತರುವಂತಹದ್ದಾಗಿದೆ ಎಂದ ಅವರು ಹಗಲಿರುಳು ಸಾರ್ವಜನಿಕರ ಸೇವೆಯಲ್ಲಿರುವ ಬೆಸ್ಕಾಂ ನೌಕರರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನಿಡುವುದನ್ನು ಕೊಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಕಚೇರಿಯಿಂದ ಪ್ರತಿಭಟನೆಯೊಂದಿಗೆ ಪ್ರಧಾನ ರಸ್ತೆಯಲ್ಲಿ ಮೆರವಣಿಗೆ ನೆಡೆಸಿ ಶಾಸಕ ರಮೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಎಸ್‌ಎಸ್‌ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ನೌಕರರು ನಂತರ ತಹಸೀಲ್ದಾರ್ ಕಚೇರಿಗೆ ತರಳಿ ತಹಸೀಲ್ದಾರ್ ರಾಮಚಂದ್ರಪ್ಪ ನವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬೆಸ್ಕಾಂ ನೌಕರರ ಕಾರ್ಯದರ್ಶಿ ರವಿಕುಮಾರ್, ಕಿರಿಯ ಎಂಜಿನಿಯರ್‌ಗಳಾದ ಮಲ್ಲಿಕಾರ್ಜುನಯ್ಯ, ಮಲ್ಲಣ್ಣ, ಕೆ.ವಿ. ನಟರಾಜು ಸೇರಿದಂತೆ ತಾಲೂಕಿನ ಎಲ್ಲಾ ಬೆಸ್ಕಾಂ ನೌಕರರು ಶಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.