ಸರ್ಕಾರಿ ಕೊಳವೆ ಬಾವಿ 500 ಮೀಟರ್ ವ್ಯಾಪ್ತಿಯ ಖಾಸಗಿ ಬೋರ್ವೆಲ್ ವಶ
ತುಮಕೂರು: ಸರ್ಕಾರಿ ಕೊಳವೆ ಬಾವಿಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆ ಬಾವಿ ತೆಗೆದಿದ್ದರೆ ಅಂತಹುಗಳನ್ನು ವಶಪಡಿಸಿಕೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
ಸರ್ಕಾರ ಕುಡಿಯುವ ನೀರಿಗಾಗಿ ಕೊರೆದ ಕೊಳವೆ ಬಾವಿಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿಯವರು ಕೊಳವೆ ಬಾವಿಗಳನ್ನು ಕೊರೆಯುವಂತಿಲ್ಲ, ಈ ಅಧಿನಿಯಮ ಉಲ್ಲಂಘನೆ ಮಾಡಿದವರಿಗೆ ಅವರ ಕೊಳವೆ ಬಾವಿಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದು ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ತಿಳಿಸಿದರು.
1 ರಿಂದ 6 ತಿಂಗಳವರೆಗೆ ಶಿಕ್ಷೆ ನೀಡಲು ಅವಕಾಶವಿದೆ. 1 ರಿಂದ 10 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದರು. ಜಿಲ್ಲೆಯ ಚಿ.ನಾ.ಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳನ್ನು ಅಂತರ ಜಲ ಅತಿ ಬಳಕೆ ಪ್ರದೇಶಗಳೆಂದು ಕರ್ನಾಟಕ ಅಂತರ್ಜಲ ಅಧಿನಿಯಮದ ಪ್ರಕರಣ 11 ರಡಿ ಅಧಿಸೂಚಿಸಲಾಗಿದ್ದು,ಈ ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಲು ಅಂತರರ್ಜಲಪ ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ.ಆದರೆ ಇದುವರೆಗೆ ಇಂತಹ ಎಷ್ಟು ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ ಅಂತರಜಲ ವಿಭಾಗದ ಹಿರಿಯ ಭೂವಿಜ್ಞಾನಿ ಎನ್. ದುರ್ಗೇಶ್ ಅವರ ಮೌನವೇ ಉತ್ತರವಾಯಿತು.
ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಕೊರೆಯಲಾಗಿರುವ ಕೊಳವೆ ಬಾವಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಹಿರಿ ಭೂವಿಜ್ಞಾನಿ ದುರ್ಗೇಶ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗುವುದು ಎಂಧು ಜಿಲ್ಲಾಧಿಕಾರಿಗಳು ತಿಳಿಸಿದರು. ನಿಯಮ ಉಲ್ಲಂಘಿಸಿ ಕೊಳವೆ ಬಾವಿಗಳು ಕೊರೆದಿರುವ ಬಗ್ಗೆ ನಾಗರೀಕರು ತಮಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಜನತೆಯಲ್ಲಿ ಮನವಿ ಮಾಡಿಕೊಂಡರು.