'ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಗುಣ ಬೇಕು'
ಕ.ಪ್ರ.ವಾರ್ತೆ ತುಮಕೂರು ಮೇ 9
ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗುತ್ತದೆ ಎಂದು ಲೇಖಕಿ ಎಂ.ಸಿ. ಲಲಿತಾ ತಿಳಿಸಿದರು.
ಎಸ್.ಎಸ್. ಪುರಂನ ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ, ನೃತ್ಯ ವೈವಿಧ್ಯಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಈ ಕಾಲಘಟ್ಟದಲ್ಲಿ ಅವರ ಬೆಳವಣಿಗೆಯತ್ತ ಗಮನ ಹರಿಸಬೇಕು. ಓದಿನ ಜೊತೆ ಇತರೆ ಆಟೋಟ ಚಟುವಟಿಕೆಗಳತ್ತಲೂ ಪ್ರೋತ್ಸಾಹ ನೀಡಿದಾಗ ಮಕ್ಕಳು ತುಂಬಾ ಖುಷಿಯಾಗಿ ಬೆಳೆಯುತ್ತವೆ ಎಂದರು. ಮಕ್ಕಳ ಸಾಂಸ್ಕೃತಿಕ ವಾತಾವರಣ ಪ್ರೋತ್ಸಾಹಿಸಲು ಬೇಸಿಗೆ ಶಿಬಿರಗಳಂತಹ ಕಾರ್ಯಚಟುವಟಿಕೆಗಳು ಉತ್ತಮವಾಗಿದ್ದು, ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ. ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ತು.ಮ. ಬಸವರಾಜು ಕಲಾ ಶಿಕ್ಷಕಿ ಸರಸ್ವತಿ, ಅನಂತಸ್ವಾಮಿ, ಎನ್. ಸೀತಾರಾಮ್, ವಿಜಯ ಇದ್ದರು.