ತುಮಕೂರಿನಲ್ಲಿ ಒಕ್ಕಲಿಗ ಶಾಸಕರಿಲ್ಲ
ತುಮಕೂರು: ತುಮಕೂರಿನಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಈವರೆಗೂ ಓರ್ವ ಶಾಸಕರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ವಿಷಾದಿಸಿದರು.
ನಗರದ ಸೇಕ್ರೇಟ್ ಹಾಟ್ ಶಾಲೆಯ ಆವರಣದಲ್ಲಿ ಉಪ್ಪಾರಹಳ್ಳಿ ಒಕ್ಕಲಿಗರ ಸಂಘದ ಒಂದನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಆಲೋಚಿಸಬೇಕಾಗಿದೆ. ಅಂತರಿಕ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ತಿಳಿಸಿದರು.
ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜನಾಂಗದವರು ಒಗ್ಗಟ್ಟಿನಿಂದ ಬೆಳವಣಿಗೆ ಹೊಂದಿದ್ದಾರೆ. ಆದರೆ ರಾಜ್ಯದಲ್ಲಿ ಆಂತರಿಕ ಕಿತ್ತಾಟದಿಂದ ಇತರೆ ಮುಂದುವರೆದ ಜನಾಂಗಗಳಿಗೆ ಸರಿಸಮಾನವಾಗಿ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಂಧ್ರದಲ್ಲಿ ಕಮ್ಮಾಗಳು, ನಾಯ್ಡುಗಳು ಬೆಳದಂತೆ ರಾಜ್ಯದಲ್ಲಿ ಒಕ್ಕಲಿಗರು ಬೆಳೆಯಲು ಸಾಧ್ಯವಾಗುತ್ತಿಲ್ಲ. ನಾಯಕತ್ವ ಮತ್ತು ಮಾರ್ಗದರ್ಶನದ ಕೊರತೆ ನಮ್ಮನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಸರಕಾರಿ ಅಧಿಕಾರಿಗಳಿಗೆ ಜಾತಿಯಿಲ್ಲ. ಆದರೆ ಒಂದು ಒಳ್ಳೆಯ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ತಾವು ಹುಟ್ಟಿನ ಜಾತಿಯನ್ನು ಮರೆಯಬಾರದು. ಸಮುದಾಯದ ಕಷ್ಟ ಸುಖಗಳಿಗೆ ಕಾನೂನಿನ ಅಡಿಯಲ್ಲಿ ಸ್ಪಂದಿಸುವ ಮನಸ್ಸು ಮಾಡಬೇಕು. ನೀವು ಸೇವೆಯಲ್ಲಿದ್ದಾಗ ಮಾಡುವ ಸಮುದಾಯದ ಕೆಲಸ ನಿವೃತ್ತಿಯ ನಂತರ ನಿಮ್ಮ ಪ್ರಯೋಜನಕ್ಕೆ ಬರಲಿದೆ. ಒಕ್ಕಲಿಗ ಸಮುದಾಯ ದೊಡ್ಡ ಹೆಜ್ಜೆಗಳನ್ನು ಇಡಬೇಕಾಗಿದೆ ಇಲ್ಲದಿದ್ದರೆ ಹಿಂದೆ ಉಳಿಯುವುದು ಖಂಡಿತ ಎಂದು ಸ್ವಾಮೀಜಿ ಎಚ್ಚರಿಸಿದರು. ಒಕ್ಕಲಿಗರು ಕೇವಲ ರಾಜಕೀಯ ಜಾಗೃತಿಯಷ್ಟೇ ಮುಖ್ಯವಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬಂದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವೆಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಳ್ಳಿ ಪೌಂಡೇಷನ್ ಅಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, ಸಮುದಾಯದ ಯುವಜನರು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನೌಕರಿಗಾಗಿ ಶಿಕ್ಷಣ ಪಡೆಯದೆ ಬದುಕಿನ ಉನ್ನತ್ತೀಕರಣ ವಿದ್ಯೆಯನ್ನು ಕಲಿಯಬೇಕು ಎಂದರು. ಉಪ್ಪಾರಹಳ್ಳಿ ಒಕ್ಕಲಿಗರ ಸಂಘ ಮಹತ್ವಾಕಾಂಕ್ಷೆ ಇಟ್ಟುಕೊಂಡು ರಚನೆಯಾಗಿದ್ದು, ಸಮುದಾಯಕ್ಕಾಗಿ ಪತ್ತಿನ ಸಹಕಾರ ಸಂಘ, ಸಮುದಾಯ ಭವನ ನಿರ್ಮಿಸುವ ಗುರಿ ಹೊಂದಿದೆ. ಅಲ್ಲದೆ ಪ್ರತಿಭಾಪುರಸ್ಕಾರದ ಮೂಲಕ ಒಕ್ಕಲಿಗ ಜನಾಂಗದ ಮಕ್ಕಳ ಉನ್ನತ ವ್ಯಾಸಾಂಗಕ್ಕೆ ಸಹಕಾರ ನೀಡಲು ನಿರ್ಧರಿಸಿದೆ ಎಂದರು.
ಗುತ್ತಿಗೆದಾರ ನರಸೇಗೌಡ ಮಾತನಾಡಿ, ಸ್ವಾಮೀಜಿಯವರು ಹೇಳಿರುವಂತೆ ಸಮುದಾಯದ ಒಳಿತಿಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಒಕ್ಕಲಿಗರ ಸಂಘದಿಂದ ಸಮುದಾಯಕ್ಕೆ ಒಳ್ಳೆಯದಾಗುವ ಯಾವುದೇ ಶಾಶ್ವತ ಕಾರ್ಯಕ್ರಮಕ್ಕೆ ನಮ್ಮ ಸಹಕಾರವಿದೆ ಎಂದು ಭರವಸೆ ನೀಡಿದರು. ಉಪ್ಪಾರಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷ ಅಂದಾನಯ್ಯ, ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಕುಮಾರ್, ಲ್ಯಾನ್ಸಿ ಪಾಯಸ್, ನಾರಾಯಣರೆಡ್ಡಿ ಇದ್ದರು.