ಪೆಟ್ಟಿಗೆ ಅಂಗಡಿ ತೆರವಿಗೆ ಬಂದ ಅಧಿಕಾರಿಗೆ ಘೇರಾವ್
ಪಾವಗಡ: ಪುರಸಭೆಯಿಂದ ನಿರ್ಮಿಸಿದ್ದ ನೂತನ ಮಳಿಗೆಗಳಿಗೆ ಅಡ್ಡಿಯಾಗಿದ್ದ ಪೆಟ್ಟಿಗೆ ಅಂಡಿಗಳನ್ನು ಪೊಲೀಸ್ ಬಂದೋಬಸ್ತ್ ನಡುವೆ ತೆರವು ಗೊಳಿಸಲು ಹೋದ ಮುಖ್ಯಾಧಿಕಾರಿಯನ್ನು ಘೇರಾವು ಹಾಕಿ ವಾಪಸ್ಸು ಕಳುಹಿಸಿದ ಘಟನೆ ಶನಿವಾರ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಡೆಯಿತು.
ಪುರಸಭೆ ವತಿಯಿಂದ ಶೇ.22ರ ಯೋಜನೆ ಅನುದಾನದಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಎಸ್‌ಸಿ, ಎಸ್‌ಟಿ ಅಭಿವೃದ್ಧಿಗಾಗಿ 7ನೂತನ ಮಳಿಗೆ ನಿರ್ಮಿಸಿದ್ದು ಪುರಸಭೆ ವತಿಯಿಂದ ಮೇ 12ಕ್ಕೆ ಈ ಮಳಿಗೆಗಳ ಹರಾಜು ನಿಗದಿಪಡಿಸಿದ್ದರು.
ಮಳಿಗೆಗಳ ಹರಾಜಿಗೆ 2ದಿನಗಳು ಬಾಕಿ ಇದ್ದ ಕಾರಣ ಮಳಿಗೆಗಳ ಪಕ್ಕದಲ್ಲಿ ಹಾಕಿಕೊಂಡಿದ್ದ ಪೆಟ್ಟಿಗೆ ಅಂಗಡಿ ತೆರವುಗೊಳಿಸಲು ಪೊಲೀಸ್ ಬಂದೋಬಸ್ತಿನಲ್ಲಿ ಪಿಎಸ್‌ಐ ನಟರಾಜ್ ಹಾಗೂ ಪುರಸಭೆ ಮುಖ್ಯಾಧಿಕಾರಿ ರಂಗಸಾಮಯ್ಯ ಪೆಟ್ಟಿಗೆಗಳನ್ನು ತೆರವುಗೊಳಿಸಲು ಮುಂದಾದಾಗ ಮುಖ್ಯಾಧಿಕಾರಿ ಮತ್ತು ಪೆಟ್ಟಿಗೆ ಮಾಲೀಕರ ಮದ್ಯೆ ಜಟಾಪಟಿ ನಡೆದು ಮುಖ್ಯಾಧಿಕಾರಿ ರಂಗಸಾಮಯ್ಯ ಮತ್ತು ಪಿಎಸ್‌ಐ ನಟರಾಜ್ ಅವರನ್ನು ವಾಪಸ್ಸು ಕಳುಹಿಸಿದ ಘಟನೆ ನಡೆಯಿತು.
ವಿವರ: ಪಟ್ಟಣದ ನೂತನ ಬಸ್ ನಿಲ್ದಾಣದಲ್ಲಿ ಪುರಸಭೆಯ ಶೇ.22ರ ಯೋಜನೆ ಅನುದಾನದಲ್ಲಿ ನಿರ್ಮಿಸಿದ್ದ ಮಳಿಗೆಗಳ ಪಕ್ಕದಲ್ಲಿ ವ್ಯಾಪಾರ ಉದ್ಧೇಶಕ್ಕಾಗಿ ಖಾಸಗಿ ವ್ಯಕ್ತಿಗಳು ಪೆಟ್ಟಿಗೆ ಅಂಗಡಿಗಳನ್ನು ತೆರೆದು ಜೀವನ ಸಾಗಿಸುತ್ತಿದ್ದರು.
ಮಳಿಗೆಗಳಿಗೆ ಅಡ್ಡಿ ಹಾಗೂ ಮಳಿಗೆಗಳ ಹಾರಾಜು ಇರುವ ಕಾರಣ ಮಾಲೀಕರಿಗೆ ಪುರಸಭೆಯಿಂದ ನೋಟಿಸ್ ನೀಡಿ ಪೆಟ್ಟಿಗೆಗಳ ತೆರವಿಗೆ ಸೂಚಿಸಿದ್ದರು.ಪೆಟ್ಟಿಗೆಗಳು ತೆರವುಗೊಳಿಸದ ಕಾರಣ ತೆರವಿಗೆ ಮುಖ್ಯಾಧಿಕಾರಿ ಮುಂದದಾಗ ಈ ಹಿಂದೆ ಅನುಮತಿ ಪಡೆಯಲಾಗಿದೆ ಎಂದು ಆರೋಪಿಸಿದರು. ಪೆಟ್ಟಿಗೆ ಅಂಗಡಿಗಳ ಮಾಲೀಕರು ಪೆಟ್ಟಿಗೆ ಅಂಗಡಿ ತೆರೆಯಲು ಕಳೆದ ಎರಡು ವರ್ಷಗಳ ಹಿಂದೆ ಪುರಸಭೆಯಿಂದ ರೆಜುಲೇಷನ್ ಮಾಡಿಕೊಟ್ಟ ದಾಖಾಲಾತಿಗಳನ್ನು ತೋರಿಸಿ ಪ್ರಶ್ನಿಸಿದ ಮೇರೆಗೆ ಮುಖ್ಯಾಧಿಕಾರಿ ರಂಗಸಾಮಯ್ಯ ಮತ್ತು ಪಿಎಸ್‌ಐ ನಟರಾಜ್ ಅಲ್ಲಿಂದ ಜಾಗ ಖಾಲಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಮುಖ್ಯಾಧಿಕಾರಿ ರಂಗಸಾಮಯ್ಯ ತಿಳಿಸಿದ್ದಾರೆ.