ಪ್ರೇರಣಾ ಶಿಬಿರ
ತುಮಕೂರು: ಕೃಷಿ ಮತ್ತು ಕೃಷಿ ಸಂಬಂಧಿತ ಉದ್ಯಮಶೀಲತೆಯಲ್ಲಿ ಆಸಕ್ತಿಯಿರುವ ವಿದ್ಯಾವಂತ ಯುವಜನರಿಗಾಗಿ ಒಂದು ದಿನದ ವಿಶೇಷ ಪ್ರೇರಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಾವಯವ ಕೃಷಿ, ಹೈನುಗಾರಿಕೆ, ಆಹಾರಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟದ ಹೊಸ ತಂತ್ರಗಳ ಕುರಿತ ಮಾಹಿತಿಯನ್ನು ನೀಡಲಾಗುವುದು. ಕಡಿಮೆ ಜಮೀನಿನಲ್ಲಿ ಪರಿಣಾಮಕಾರಿ ನೀರಿನ ನಿರ್ವಹಣೆಯ ಕ್ರಮಗಳ ತಂತ್ರಜ್ಞಾನವನ್ನು ತಿಳಿಸಿಕೊಡಲಾಗುವುದು. ಆಸಕ್ತರು, 9449768426 ಸಂಪರ್ಕಿಸುವಂತೆ ಕೋರಲಾಗಿದೆ.
ಅಣುಕು ಶವಯಾತ್ರೆ ಇಂದು
ಹುಳಿಯಾರು: ಬಾಬಾ ರಾಮ್‌ದೇವ್ ಹೇಳಿಕೆ ಖಂಡಿಸಿ ಹೋಬಳಿಯ ದಲಿತ ಸಂಘಟನೆಗಳು 12ರ ಬೆಳಿಗ್ಗೆ ಪಟ್ಟಣದಲ್ಲಿ ಬಾಬಾ ರಾಮ್‌ದೇವ್ ಅವರ ಅಣುಕು ಶವಯಾತ್ರೆ ಹಮ್ಮಿಕೊಂಡಿದ್ದಾರೆ. ಅಂಬೇಡ್ಕರ್ ಭವನದಿಂದ ಅಣುಕು ಶವಯಾತ್ರೆ ಪ್ರಾರಂಭವಾಗಲಿದೆ.
ಚಂದ್ರಮಂಡಲ ರಥೋತ್ಸವ ಇಂದು
ಹುಳಿಯಾರು: ಹೋಬಳಿಯ ತಮ್ಮಡಿಹಳ್ಳಿಯ ಶಿವಯೋಗಿ ಸಿದ್ದರಾಮೇಶ್ವರಸ್ವಾಮಿ ನೂತನ ಚಂದ್ರಮಂಡಲ ರಥೋತ್ಸವ 12ರ ಸಂಜೆ ನಡೆಯಲಿದೆ. ರಥೋತ್ಸವದ ಅಂಗವಾಗಿ ನೂತನ ರಥಕ್ಕೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿವೆ, ಅನ್ನಸಂತರ್ಪಣೆಯಿದೆ.
ಮತ್ತೆ ಚಿಕೂನ್‌ಗುನ್ಯಾ: ಆತಂಕ
ಹುಳಿಯಾರು: ನಿರಂತರ ಮೈಕೈ ನೋವು ಹಾಗೂ ಜ್ವರದಿಂದ ಜನರನ್ನು ನರಳುವಂತೆ ಮಾಡುವ ಚಿಕೂನ್ ಗುನ್ಯಾ ಮತ್ತೆ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಬರದಲೇಪಾಳ್ಯದಲ್ಲಿ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ. ಗ್ರಾಮದ ಜನ ಕಳೆದ ಒಂದು ವಾರದಿಂದ ಚಿಕೂನ್ ಗುನ್ಯಾಗೆ ತುತ್ತಾಗಿ ಇಡೀ ಗ್ರಾಮ ನರಳುತ್ತಿದೆ. ಇಡೀ ಗ್ರಾಮ ರೋಗದಿಂದ ನರಳುತ್ತಿದ್ದರೂ ಸಂಬಂಧಪಟ್ಟ ಗ್ರಾಪಂ ಆಗಲಿ, ಆರೋಗ್ಯ ಇಲಾಖೆಯಾಗಲೀ ಇತ್ತ ಗಮನಹರಿಸಿಲ್ಲ. ಕೆಂಕೆರೆ ಗ್ರಾಪಂನ ಬರದಲೇಪಾಳ್ಯದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಇರುವ ಚರಂಡಿಗಳಲ್ಲಿ ಮಣ್ಣು ತುಂಬಿ ಸೊಳ್ಳೆಗಳ ಆಶ್ರಯ ತಾಣವಾಗಿದೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಇಲ್ಲಿನ ಜನತೆಗೆ ಚಿಕಿತ್ಸೆ ನೀಡುವಲ್ಲಿ ಮುಂದಾಗಬೇಕಿದೆ.
ಪ್ಯಾರಾಮೆಡಿಕಲ್ಸ್ ವಾರ್ಷಿಕೋತ್ಸವ
ತುಮಕೂರು: ತುಮಕೂರಿನ ಶ್ರೀದೇವಿ ಪ್ಯಾರಾ ಮೆಡಿಕಲ್ಸ್ ಕೋರ್ಸ್‌ನ ವಿದ್ಯಾಲಯದಲ್ಲಿ ಕಾಲೇಜಿನ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಈಶ್ವರಯ್ಯ ಮಾತನಾಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಟ್ಟ ಚಟಗಳಿಗೆ ಬಲಿಯಾಗದೆ, ಉತ್ತಮ ಜೀವನ ನಡೆಸುವ ಬಗ್ಗೆ ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಲಹೆ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿ-ವಿದ್ಯಾರ್ಥಿಗಳ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರಿನ್ಸಿಪಾಲ್ ಡಾ.ಎಂ.ಸಿ. ಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವೃತ್ತಿಯ ಬಗ್ಗೆ ಗೌರವ ಇಟ್ಟುಕೊಳ್ಳುವಂತೆ, ಎಲ್ಲ ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹೋದರ ಭಾವನೆಯಿಂದ ಚಿಕಿತ್ಸೆ ನೀಡುವಂತೆ ಕರೆ ನೀಡಿದರು. ಆಡಳಿತಾಧಿಕಾರಿ ಟಿ.ವಿ. ಬ್ರಹ್ಮದೇವಯ್ಯ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.