ಜ್ಞಾನಭಾರತಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ
ಕುಣಿಗಲ್: ತಾಲೂಕಿನ ಗ್ರಾಮಾಂತರ ಪ್ರದೇಶದ ಜನತೆಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ತಾಲೂಕು ಒಕ್ಕಲಿಗ ಸಂಘದಾಶ್ರಯದಲ್ಲಿ ಸ್ಥಾಪಿಸಲಾಗಿರುವ ಜ್ಞಾನಭಾರತಿ ವಿಜ್ಞಾನ ಪ.ಪೂ.ಕಾಲೇಜು, ಜ್ಞಾನಭಾರತಿ ಆಂಗ್ಲಮಾದ್ಯಮ ಪ್ರೌಢಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಪ್ರಸಕ್ತ ಸಾಲಿನಲ್ಲಿ ಫಲಿತಾಂಶದಲ್ಲಿ ಉತ್ತಮ ಪ್ರಗತಿಸಾಧಿಸಿವೆ ಎಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅಭಿಪ್ರಾಯಪಟ್ಟರು.
ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಜ್ಞಾನಭಾರತಿ ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಮಾತನಾಡಿದ ಅವರು, ಜ್ಞಾನಭಾರತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಕಳೆದ ಆರು ವರ್ಷಗಳಿಂದಲೂ ಸತತವಾಗಿ ಶೇಕಡ ನೂರಕ್ಕೆ ನೂರು ಫಲಿತಾಂಶ ದಾಖಲಿಸುತ್ತಿದ್ದು, ಈ ಬಾರಿಯೂ 128 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 44 ಮಂದಿ ಅತ್ಯಧಿಕ ಶ್ರೇಣಿಯಲ್ಲಿ, ಉಳಿದ 88ಮಂದಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಮೆಣಸಿನಹಳ್ಳಿಶಾಲೆಯ ಶಿಕ್ಷಕ ಜಿ,ನಾಗರಾಜುರವರ ಪುತ್ರಿ ಮೇಘನಾ 608 ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ಎಸ್,ಪವನ್ 603 ಅಂಕಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಶ್ರೀಕಂಠ ಎಂಬಾತ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದರೆ, ಶಾಲಿನಿ ಆರ್, ಶಾಲಿನಿ ಎಂ.ರಶ್ಮಿ, ಶರತ್ಕುಮಾರ್ ಎಂಬ ವಿದ್ಯಾರ್ಥಿಗಳು ಸಮಾಜಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ.
ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 50 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ ಐವತ್ತುಮಂದಿ ಉತ್ತೀರ್ಣರಾಗುವ ಮೂಲಕ ಶೇಕಡಾ ನೂರಕ್ಕೆ ನೂರು ಫಲಿತಾಂಶ ಪಡೆದರೆ, ಜ್ಞಾನಭಾರತಿ ವಿಜ್ಞಾನ ಪ.ಪೂ.ಕಾಲೇಜು ಶೇ.81ರಷ್ಟು ಫಲಿತಾಂಶ ಪಡೆಯುವ ಮೂಲಕ ತಾಲೂಕಿಗೆ ಮೊದಲ ಉತ್ತಮ ಫಲಿತಾಂಶ ಪಡೆದ ಕಾಲೇಜೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸಂಘಧ ಕಾರ್ಯದರ್ಶಿ ಅನಂತಯ್ಯ, ಗೋವಿಂದಯ್ಯ, ಖಜಾಂಚಿ ಗಂಗಶಾನಯ್ಯ, ನಿರ್ದೇಶಕರಾದ ರಾಜಣ್ಣ, ಸೋಮಣ್ಣ ಪ್ರಾಚಾರ್ಯ ಗೋವಿಂದೇಗೌಡ ಇತರರು ಇದ್ದರು.