ಪಾನಮತ್ತ ಚಾಲಕನಿಂದ ದಾಂದಲೆ: ಹಮಾಲಿಗೆ ಗಾಯ
ಕುಣಿಗಲ್: ಪಟ್ಟಣದ ಸಾರಿಗೆ ಸಂಸ್ಥೆ ಬಸ್ನಿಲ್ದಾಣ ಮುಂಭಾಗದಲ್ಲಿ ಪಾನಮತ್ತ ಬಿಎಂಟಿಸಿ ಚಾಲಕ ನಡೆಸಿದ ದಾಂದಲೆಯಿಂದಾಗಿ ಹಮಾಲಿಯೊಬ್ಬನಿಗೆ ಪ್ರಾಣಾಂತಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ದಾಂಧಲೆ ನಡೆಸಿದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನ ಯಲಹಂಕ 30ನೇ ಘಟಕದ ಬಿಎಂಟಿಸಿ ಚಾಲಕ ಶಿವನಂಜಯ್ಯ, ಮೂಲತಃ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಹಂಗರಹಳ್ಳಿ ಗ್ರಾಮದವನಾಗಿದ್ದು, ಮಂಗಳವಾರ ಸಾರಿಗೆ ಸಂಸ್ಥೆ ಸಮೀಪದ ಬಾರ್ನಲ್ಲಿ ಕಂಠಪೂರ್ತಿ ಕುಡಿದು, ಅದರ ಅಮಲಿನಲ್ಲಿ ದಾಂಧಲೆ ಪ್ರಾರಂಭಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಸತೀಶ ಎಂಬ ಹಮಾಲಿಗೆ ಏಕಾಏಕಿ ಕಲ್ಲಿನಿಂದ ಮುಖ-ತಲೆಗೆ ಮನಬಂದಂತೆ ಗುದ್ದಿದ್ದಾನೆ. ಇದರಿಂದ ಬೇಸತ್ತ ಆಟೋ ಚಾಲಕರು, ಸಾರ್ವಜನಿರು ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿ, ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ.