ಬಾಪೂ ವಿಕಾಸ ಮಂದಿರದಲ್ಲಿ ವಿಶ್ವ ತಾಯಂದಿರ ದಿನಾಚರಣೆ
ತುಮಕೂರು: ಗಾಂಧೀಜಿ ಪ್ರಭಾವದಿಂದ ದೇಶಿ ಮತ್ತು ವಿದೇಶದಲ್ಲಿ ಬಹಳಷ್ಟು ಮಹಿಳೆಯರು ಪ್ರಭಾವಿತರಾಗಿ, ಅತ್ಯಂತ ಮಾನವೀಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಅನಾಥ ಮಕ್ಕಳಿಗೆ ಶಿಕ್ಷಣ ನೀಡಿ, ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆಂದು ಮೈಸೂರು ಹುಲಿ ಅಭಿಮಾನಿಗಳ ಮಹಾವೇದಿಕೆ ಗೌರವಾಧ್ಯಕ್ಷ ಜಿ.ಕೆ. ಸಮಿ ಹೇಳಿದರು.
ಇಲ್ಲಿನ ಶಾರದಾದೇವಿ ನಗರದಲ್ಲಿರುವ ಬಾಪೂ ವಿಕಾಸ ಮಂದಿರದಲ್ಲಿ ಮೈಸೂರುಹುಲಿ ಅಭಿಮಾನಿಗಳ ಮಹಾವೇದಿಕೆ, ಚಿತ್ರನಟ ಪ್ರೇಮ್, ಜಿಲ್ಲಾ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮ್ಮ ಸತ್ಯ. ಅಪ್ಪ ಮಿತ್ಯ. ಗ್ರಾಮದಿಂದ ವಿಶ್ವಮಟ್ಟದವರೆಗೆ ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಸಮಾಜ ಕಟ್ಟುವ ಕಾರ್ಯಕ್ಕೆ ಮಹತ್ವ ನೀಡಿದ್ದಾರೆ. ಮೀರಾಬೆಹನ್, ಮದರ್ ಥೆರೇಸಾ, ಇಂದಿರಾಗಾಂಧಿ, ಮಾರ್ಗರೆಟ್ ಥ್ಯಾಚರ್ ಅಲ್ಲದೆ ರಾಜ್ಯ, ಸ್ಥಳೀಯ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಗೆ ಕಾಣಿಕೆ ನೀಡಿದ್ದಾರೆ.
ಮದರ್ ಥೆರೇಸಾ ಒಬ್ಬ ಸಾಮಾನ್ಯ ಮಹಿಳೆ. ಆದರೆ ಅಸಾಮಾನ್ಯವಾದ ಕೆಲಸವನ್ನು ಮಾಡುವ ಮೂಲಕ ವಿಶ್ವ ತಾಯಂದಿರ ದಿನಾಚರಣೆಗೆ ತಮ್ಮದೆ ಆದ ಗೌರವ ಸಲ್ಲಿಸಿದ್ದಾರೆಂದರು.
ಇಪ್ಟಾ ಪ್ರಧಾನ ಕಾರ್ಯದರ್ಶಿ ಜಿ. ಇಂದ್ರಕುಮಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾರು ಅನಾಥರಲ್ಲ. ಅನಾಥ ಭಾವದಿಂದ ನರಳುವವರಿಗೆ ಸ್ವಾಂತನ ನೀಡಿ, ಶಿಕ್ಷಣದ ಮೂಲಕ ಸ್ವಾವಲಂಬಿ ಜೀವನ ರೂಪಿಸಲು ಹಲವರು ಮಹಾನೀಯರು ಕಾರಣರಾಗಿದ್ದಾರೆ. ಜನ್ಮಕೊಟ್ಟ ತಾಯಿಗೆ ರಕ್ಷಣೆ, ಪೋಷಣೆ ಮಾಡದ ಹಲವಾರು ಮಂದಿ ತೋರಿಕೆಗೆ ವಿಶ್ವ ತಾಯಂದಿರ ದಿನಾಚರಣೆಯನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಜನ್ಮಕೊಟ್ಟ ತಾಯಿಯನ್ನು ಪೋಷಿಸಿ, ಅವರನ್ನು ಗೌರವಿಸುವುದೇ ದಿನಾಚರಣೆಗೆ ಮಹತ್ವ ಬರುತ್ತದೆ ಎಂದರು.
ಚಿತ್ರನಟ ಪ್ರೇಮ್ ಅಭಿಮಾನಿಗಳ ಬಳಗದ ಅಧ್ಯಕ್ಷ ವಿಶ್ವಜ್ಞಾನೇಶ್ ಮಾತನಾಡಿ, ಯಾವುದೋ ಕಾರಣಕ್ಕೆ ಅನಾಥರಾಗುವ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ, ಅವರು ಸಮಾಜಕ್ಕೆ ಕಂಟಕರಾಗದಂತೆ ನೋಡಿಕೊಳ್ಳುವುದು ಅತ್ಯಂತ ಮಹತ್ವದ ಜವಾಬ್ದಾರಿ. ಎಲ್ಲಾ ಸೌಕರ್ಯ ಇರುವ ಜನರು ಬಾಪೂ ವಿಕಾಸ ಮಂದಿರದಲ್ಲಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ಸಹಕಾರ ನೀಡಿ, ಉನ್ನತ ಓದಿಗೆ ಅನುಕೂಲ ಕಲ್ಪಿಸಬೇಕೆಂದರು.
ಮಹಾವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಖಲೀಲ್, ತಿಪಟೂರು ಫೈರೋಜ್, ಅಜೀಮ್ ಪಾಷ, ಸಾಹಿರಾಬಾನು, ನಗರಸಭೆ ಮಾಜಿ ಸದಸ್ಯೆ ದಿಲ್ಶಾದ್
ಬೇಗಂ ಮತ್ತಿತರರು ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ನಂತರ ವಿಕಾಸ ಮಂದಿರದ ಮಕ್ಕಳಿಗೆ ಸಿಹಿ ಹಂಚಲಾಯಿತು.