ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೃಷಿ ಸಹಾಯಕರ ಕಾರ್ಯಾಲಯ ಶಿಥಿಲ

Rashmi Kasaragodu
Updated On : 15 May 2014, 12:55 pm

ಕುಣಿಗಲ್: ತಾಲೂಕಿನ ಕೃಷಿ ಚಟುವಟಿಕೆಗಳು ಸೇರಿದಂತೆ ರೈತರಿಗೆ ಸಮಗ್ರ ಸಹಾಯ, ಸಹಕಾರ ನೀಡಿ ಕೃಷಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಶಕ್ತಿ ಕೇಂದ್ರವಾದ  ಕೃಷಿ ಸಹಾಯಕ ನಿರ್ದೇಶಕರ ಕಾರ್ಯಾಲಯ ಶಿಥಿಲಾವಸ್ಥೆಗೆ ತಲುಪಿದ್ದು, ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಪ್ರಾಣಭಯದಿಂದ ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.
ಪಟ್ಟಣದ ತುಮಕೂರು ರಸ್ತೆಯಲ್ಲಿನ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಪಕ್ಕದಲ್ಲೆ ಸ್ವಂತ ಸ್ಥಳದಲ್ಲಿ ನಿರ್ಮಾಣವಾಗಿರುವ ತಾಲೂಕು ಸಹಾಯಕ ಕೃಷಿ ನಿದೇರ್ಶಕರ ಕಾರ್ಯಾಲಯವನ್ನು
18-4-1986ರಲ್ಲಿ ಅಂದಿನ ಕುಣಿಗಲ್ ಶಾಸಕ ವೈ.ಕೆ.ರಾಮಯ್ಯನವರ ಅಧ್ಯಕ್ಷತೆಯಲ್ಲಿ ಹುಲಿಯೂರುದುರ್ಗ ಕ್ಷೇತ್ರದ ಶಾಸಕ ಡಿ.ನಾಗರಾಜಯ್ಯನವರ ಉಪಸ್ಥಿತಿಯಲ್ಲಿ ಅಂದಿನ ಕೃಷಿ ಸಚಿವ ಎಂ.ಪಿ.ಪ್ರಕಾಶ್ ಶಂಕುಸ್ಥಾಪನೆ ನೆರವೇರಿಸಿದ್ದು, ಸತತ ಆರು ವರ್ಷಗಳ ಕಾಮಗಾರಿಯ ನಂತರ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು, 5-12-1992ರಲ್ಲಿ ಶಾಸಕ ವೈ.ಕೆ.ರಾಮಯ್ಯನವರ ಅಧ್ಯಕ್ಷತೆಯಲ್ಲಿ ಕೃಷಿ ಸಚಿವರಾದ ಎನ್. ಹುಚ್ಚಮಾಸ್ತಿಗೌಡರು ಉದ್ಘಾಟನೆ ನೆರವೇರಿಸಿದ್ದರು.
ಕಟ್ಟಡ ನಿರ್ಮಾಣವಾದಾಗಿನಿಂದಲೂ ಕಟ್ಟಡ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ, ಇಂದು ಕಟ್ಟಡಕ್ಕೆ ಅಳವಡಿಸಲಾಗಿರುವ ಪಿಲ್ಲರ್‌ಗಳ ಮೇಲಿನ ಸಿಮೆಂಟ್ ಕಿತ್ತು ಹೊರಬಂದರೆ, ಬಹುತೇಕ ಎಲ್ಲಾ ಕಿಟಕಿಗಳಿಗೆ ಅಳವಡಿಸಲಾದ ಸಜ್ಜಾ ಪೂರ್ಣ ಕುಸಿದು ನೆಲಕ್ಕೆ ಬಿದ್ದಿದೆ. ಇನ್ನು ಕಟ್ಟಡದ ಹಿಂಭಾಗಕ್ಕೆ ತೆರಳಿದರೆ ಕಟ್ಟಡ ಯಾವಾಗಬೇಕಾದರೂ ಉರುಳಿ ಬೀಳುವಂತ ಸ್ಥಿತಿ ರಾಚುತ್ತಿದೆ. ಮಳೆ ಬಂತೆಂದರೆ ಕಟ್ಟಡದ ಬಹುತೇಕ ಮೇಲ್ಚಾವಣಿಯಿಂದ ಸೋರಿಕೆಯಾಗಿ ರೈತರಿಗೆ ವಿತರಿಸಲು ಸಂಗ್ರಹಿಸುವ ಸಾಮಗ್ರಿಗಳು ಹಾನಿಗೊಳಗಾಗುವ ಜೊತೆಯಲ್ಲಿ, ಇಲಾಖೆಯ ದಾಖಲೆಗಳು ಹಾನಿಗೊಳಗಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ದಿನಂಪ್ರತಿ ನೂರಾರು ರೈತರು ತಮ್ಮ ಹಲವು ಸಮಸ್ಯೆ, ಕೆಲಸ ಕಾರ್ಯಗಳಿಗೆ ಕಚೇರಿಗೆ ಎಡತಾಕುವುದು ಸರ್ವೆ ಸಾಮಾನ್ಯವಾಗಿದ್ದು, ಕಟ್ಟಡ ಕುಸಿದು ಯಾವುದೇ ಅನಾಹುತವಾಗುವ ಮುನ್ನ ಸಂಬಂಧ ಪಟ್ಟ ಇಲಾಖೆಯ ಮೇಲಾಧಿಕಾರಿಗಳು ಅಥವಾ ಜಿಲ್ಲಾಡಳಿತ ಎಚ್ಚೆತ್ತು ಅಗತ್ಯ ಕ್ರಮ ಕೈಗೊಂಡು ಕಟ್ಟಡ ದುರಸ್ತಿ ಅಥವಾ ಪುನರ್ ನಿರ್ಮಾಣ ಕೈಗೊಳ್ಳಬೇಕೆಂದು ರೈತರಾದ ಕೃಷ್ಣಪ್ಪ, ಬಸವಯ್ಯ, ನಾರಾಯಣಪ್ಪ ಇತರರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement