ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಂಗನಾಮ ಹಾಕಿ ಪರಾರಿಯಾಗಲು ಯತ್ನಿಸಿದವ ಈಗ ಪೊಲೀಸರ ಅತಿಥಿ

Rashmi Kasaragodu
Updated On : 15 May 2014, 12:56 pm

ಕುಣಿಗಲ್ : ತಾನು ಜಿಲ್ಲಾಧಿಕಾರಿಗೆ ಸರಿಸಮಾನವಾದ ಹುದ್ದೆಯಲ್ಲಿದ್ದು, ಗ್ರಾಮದ ನಿರುದ್ಯೋಗಿಗಳಿಗೆ ಕೆಲಸ ಕೊಡಿಸಿ, ಗ್ರಾಮದೇವತೆ ದೇಗುಲವನ್ನು ಪುನರುಜ್ಜೀವನಗೊಳಿಸುವುದಾಗಿ ಗ್ರಾಮಸ್ಥರನ್ನು ನಂಬಿಸಿ ಗ್ರಾಮಸ್ಥರಿಂದ 14ಲಕ್ಷಕ್ಕೂ ಹೆಚ್ಚು ಹಣವಸೂಲು ಮಾಡಿ ಪಂಗನಾಮ ಹಾಕಿ ಪರಾರಿಯಾಗಲು ಯತ್ನಿಸಿದವನ್ನು ಗ್ರಾಮಸ್ಥರು ಥಳಿಸಿ, ಪೊಲೀಸರು ವಶಕ್ಕೆ ನೀಡಿದ ಘಟನೆ ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
 ಗ್ರಾಮಸ್ಥರಿಂದ ಥಳಿತಕ್ಕೊಳಗಾದ ವ್ಯಕ್ತಿಯನ್ನು ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಗೊಲ್ಲರಹಟ್ಟಿ ಗ್ರಾಮದ ಶಿವಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳ ಕೆಳಗೆ ಹುಲಿಯೂರುದುರ್ಗ ಸಮೀಪದ ಹಂಗರಹಳ್ಳಿ ಗ್ರಾಮಕ್ಕೆ ತನ್ನ ಪರಿಚಯಸ್ಥರ ಮೂಲಕ ಕಾರಿನಲ್ಲಿ ಆಗಮಿಸಿ, ಕಾರಿಗೆ ಕರ್ನಾಟಕ ಸರ್ಕಾರದ ನಾಮಫಲಕ ಹಾಕಿಕೊಂಡು, ಮೊದ ಮೊದಲಿಗೆ ಗ್ರಾಮದಲ್ಲಿನ ಕೆಲ ಕಾರ್ಯಕ್ರಮಗಳಿಗೆ ತಾನೆ ದುಡ್ಡು ಹಾಕಿ ನಾಟಕ, ಆರ್ಕೆಸ್ಟ್ರಾ ಆಯೋಜಿಸಿ, ತಾನೂ ಜಿಲ್ಲಾಧಿಕಾರಿಗೆ ಸರಿಸಮಾನವಾದ ಹುದ್ದೆಯಲ್ಲಿದ್ದು,  ನಿರುದ್ಯೋಗಿಗಳಿಗೆ ಕೆಲಸ ಕೊಡಿಸಿ, ಗ್ರಾಮದೇವತೆ ದೇವಾಲಯವನ್ನು ಪುನರುಜ್ಜೀವನಗೊಳಿಸುವುದಾಗಿ ಗ್ರಾಮಸ್ಥರನ್ನು ನಂಬಿಸಿದ.
ನಂಬಿಕೆ ಬರುವಂತೆ ಮಾಡಿದ: ಇದೇ ಗ್ರಾಮದ ಯುವಕನೋರ್ವನನ್ನು ಚಾಲಕನ್ನಾಗಿ ನೇಮಿಸಿಕೊಂಡು, ಆತನೊಂದಿಗೆ ಸುಖಾಸುಮ್ಮನೆ ರಾಮನಗರ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಇತರೆಡೆ ಸುತ್ತಾಡಿಸಿ, ಯುವಕನಿಗೆ ನಂಬಿಕೆ ಬರುವಂತೆ ಮಾಡಿದ. ಗ್ರಾಮಸ್ಥರಿಂದ ದೇವಾಲಯ ಅಭಿವೃದ್ಧಿ ಸೇರಿದಂತೆ ಗ್ರಾಮದ ಹತ್ತಾರು ಮಂದಿ ಯುವಕರಿಗೆ ಬೆಂಗಳೂರಿನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸುಮಾರು 14ಲಕ್ಷಕ್ಕೂ ಹೆಚ್ಚಿನ ಹಣ ವಸೂಲು ಮಾಡಿದ್ದನ್ನೆಲಾಗಿದೆ. ಹಣ ವಸೂಲಿಯಾದ ನಂತರ ಗ್ರಾಮಕ್ಕೆ ಬರುವುದನ್ನೆ ಕಡಿಮೆ ಮಾಡಿದ್ದರಿಂದ ಸಂಶಯಗೊಂಡ ಗ್ರಾಮಸ್ಥರು ಈತನ ಪತ್ತೆಗೆ ಯತ್ನಿಸಿದರು. ಆದರೆ ಅನಿರೀಕ್ಷಿತವಾಗಿ ಮಂಗಳವಾರದಂದು ಗ್ರಾಮಕ್ಕೆ ಅಗಮಿಸಿದಾಗ ಗ್ರಾಮಸ್ಥರು, ಈತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಶಿವಕುಮಾರನ ವಂಚಕತನ ಬೆಳಕಿಗೆ ಬಂತು. ಆತನಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು, ತಾವು ನೀಡಿರುವ ಹಣ ನೀಡುವವರೆಗೂ ಬಿಡುವುದಿಲ್ಲವೆಂದು ಗ್ರಾಮದ ದೇವಾಲಯ ಕೊಣೆಯಲ್ಲಿ ಕೂಡಿಟ್ಟರು. ಗ್ರಾಮದ ಇತರೆ ಕೆಲವರು ವಿಷಯವನ್ನು ಹುಲಿಯೂರುದುರ್ಗ  ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗ ಪೊಲೀಸರು, ವಂಚಕ ಶಿವಕುಮಾರನ್ನು ಗ್ರಾಮಸ್ಥರಿಂದ ಬಿಡಿಸಿ, ಠಾಣೆಗೆ ಕರೆತಂದಿದ್ದು, ವಂಚನೆಗೊಳಗಾದ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ  ಮುಂದಿನ ಕ್ರಮ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement