ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈತರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲಿ

Rashmi Kasaragodu
Updated On : 15 May 2014, 12:56 pm

ಕ.ಪ್ರ.ವಾರ್ತೆ    ಮಧುಗಿರಿ    ಮೇ 14
ರೈತರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ತಮ್ಮ  ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಎಸ್ಸಿಪಿ ಮತ್ತು ಎಸ್ಟಿಪಿ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದ ಬಡ ರೈತರಿಗೆ ಪಂಪು, ಮೋಟಾರ್, ಕೇಬಲ್ ವಿತರಿಸಿ ಮಾತನಾಡಿ, ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆದು ಕೊಳ್ಳಬೇಕು. ಒಂದು ವೇಳೆ ಸೌಲಭ್ಯ ಪಡೆದವರು ಮಾರಾಟ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಮತ್ತು ಸಾರ್ವಜನಿಕರ ಸಹಕಾರದಿಂದ ತಾಲೂಕಿನಲ್ಲಿ ಶೇ.98ರಷ್ಟು ರೇಷನ್ ಕಾರ್ಡ್ ವಿತರಿಸುವ ಮೂಲಕ ಬಡವರ ಪರವಾಗಿ  ಕೆಲಸ ಮಾಡುತ್ತಿದ್ದೇವೆ.
ಅಧಿಕಾರಿಗಳು ಕೂಡ ಮುತುವರ್ಜಿ ವಹಿಸಿ ಜನರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಅನರ್ಹರ ಬಗ್ಗೆ ದೂರು ಬಂದರೆ ಸೌಲಭ್ಯ ವಜಾ ಮಾಡುವ ಜತೆಗೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳಿಸುವುದಾಗಿ ರಾಜಣ್ಣ ಎಚ್ಚರಿಕೆ ನೀಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ 1 ವರ್ಷ ಪೂರೈಸಿದ್ದು, ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಬಹುತೇಕ  ಎಲ್ಲ ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ಈಡೇರಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಮಧುಗಿರಿ ಬರಪೀಡಿತ ತಾಲೂಕಾಗಿದ್ದು ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಸಲುವಾಗಿ ಸರ್ಕಾರ ಈಗಾಗಲೇ ಎತ್ತಿನ ಹೊಳೆ ಯೋಜನೆಗೆ ಹಣ ಮೀಸಲಿಟ್ಟಿದ್ದು, ಅತಿ ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಜನರ ನಿರೀಕ್ಷಗೆ ತಕ್ಕಂತೆ ಕೆಲಸ ಸರ್ಕಾರ ಕೆಲಸ ಮಾಡುತ್ತಿದ್ದು, ತಾಲೂಕಿನಲ್ಲಿ 11,116 ಮಂದಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಅಧಿಕಾರಿಗಳ ಸಹಕಾರದಿಂದ ಶೇ.100 ರಷ್ಟು ವೇತನ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜಣ್ಣ ಭರವಸೆ ನೀಡಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಜ್ಞಾನಮೂರ್ತಿ, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಮುಖಂಡ ಎಸ್.ಡಿ. ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್‌ಗೋಪಾಲ್ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement