ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೂಕ್ತ ದಾಖಲೆ ನೀಡಿದ್ದರೂ ಕಲ್ಲುಗಣಿಗಾರಿಕೆಗೆ ಅಡ್ಡಿ

Vishwanath S
Updated On : 19 May 2014, 12:49 pm

ಕ.ಪ್ರ.ವಾರ್ತೆ ,  ಕುಣಿಗಲ್ ,  ಮೆ18
ಕಲ್ಲುಗಣಿಗಾರಿಕೆಗೆ ನಡೆಸಲು ಸೂಕ್ತ ಪ್ರಕ್ರಿಯೆ ಪೂರೈಸಿದ್ದರೂ, ಗ್ರಾಮದ ಕೆಲ ಜನರು ಅಡ್ಡಿಪಡಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಕಲ್ಲುಗಣಿಗಾರಿಕೆ ನಡೆಸಲು ಪೊಲೀಸ್ ರಕ್ಷಣೆ ನೀಡುವಂತೆ ಭೋವಿಜನಾಂಗ ಒಕ್ಕೂಟದ ರಾಜ್ಯಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  
ಶನಿವಾರ ಬೆಳಗ್ಗೆ ಒಕ್ಕೂಟದ ರಾಜ್ಯಾಧ್ಯಕ್ಷ ನಂಜಪ್ಪ ಭೋವಿ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಜಿಲ್ಲಾಧ್ಯಕ್ಷ ವೆಂಕಟಸುಬ್ಬಯ್ಯ ನೇತೃತ್ವದಲ್ಲಿ ಸಂಘಟಿತರಾದ ಜನಾಂಗದವರು, ಭೋವಿ ಜನಾಂಗದವರು ಕಲ್ಲುಗಾಣಿಗಾರಿಕೆ ನಡೆಸುವುದಕ್ಕೆ ಕಿರುಕುಳ ನೀಡುತ್ತಿರುವವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಕುಲಕಸಬನ್ನು ನಿರ್ವಹಿಸಲು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದು ಇಲಾಖಾಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿಯೂ ಘೋಷಣೆ ಕೂಗಿದರು.
ಜಿಲ್ಲಾಧ್ಯಕ್ಷ ವೆಂಕಸುಬ್ಬಯ್ಯ ಮಾತನಾಡಿ, ತಾಲೂಕಿನ ವಿವಿಧೆಡೆಗಳಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದಿದ್ದರೂ, ಕಲ್ಲುಗಣಿಗಾರಿಕೆ ಕ್ರಷರ್‌ಗಳನ್ನು ರಾಜರೋಷವಾಗಿ ನಡೆಸುತ್ತಿದ್ದರೂ ಅತ್ತ ಕಡೆ ತಲೆಹಾಕದ ಕಂದಾಯ ಇಲಾಖೆ ಸಿಬ್ಬಂದಿ, ಭೋವಿಜನಾಂಗದವರು ಗುಡ್ಡಗಳಲ್ಲಿ ಕೈ ಸಲಕರಣೆಗಳ ಮೂಲಕ ಕಲ್ಲು ಕುಟ್ಟುವೆ ಕೆಲಸ ಮಾಡುತ್ತಿದ್ದರೆ ಅಂತಹವರನ್ನು ಕರೆತಂದು ವಿನಾಕಾರಣ ಕಿರುಕುಳ ನೀಡುತ್ತಾರೆ. ಇನ್ನು ಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡಿಕೊಡಿ ಎಂದು ಅರ್ಜಿಹಾಕಿದರೆ, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರ ಹಂತದಲ್ಲೆ ಲಕ್ಷೋಪಲಕ್ಷ ಲಂಚ ಕೇಳುತ್ತಾರೆ. ಹೀಗಾದರೆ ಕುಲಕಸುಬಾದ ಕಲ್ಲು ಕುಟ್ಟುವ ಕೆಲಸ ಮಾಡುವ ಭೋವಿಜನಾಂಗದವರು ಬದುಕುವುದಾದರೂ ಹೇಗೆ? ಸಾಮಾಜಿಕ ನ್ಯಾಯವನ್ನು ತಾಲೂಕು ಆಡಳಿತ ಕಡೆಗಣಿಸುತ್ತಿದೆ ಎಂದು ದೂರಿ, ಮುಂದಿನ ದಿನಗಳಲ್ಲಿ ಭೋವಿ ಜನಾಂಗದವರ ಮೇಲಿನ ಕಿರುಕುಳ ತಪ್ಪಿಸದಿದ್ದಲ್ಲಿ  ಜಿಲ್ಲೆ, ರಾಜ್ಯಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಕ್ಷಣೆ ನೀಡಿ: ರಾಜ್ಯಾಧ್ಯಕ್ಷ ನಂಜಪ್ಪ ಭೋವಿ, ತಾಲೂಕಿನ ಹುತ್ರಿದುರ್ಗದ ವೈಜಿಪುರದ ಗೋಮಾಳದಲ್ಲಿ ನಿಯಮಾನುಸಾರ ಅರ್ಜಿಹಾಕಿಕೊಂಡು ಕಲ್ಲುಗಣಿಗಾರಿಕೆಗೆ ಮುಂದಾಗಿದ್ದು, ಇಲ್ಲಿನ ಕೆಲ ಸ್ಥಳೀಯರು ತಮಗೆ ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಇವರಿಂದ ತಮಗೆ ಪ್ರಾಣಬೆದರಿಕೆ ಇದ್ದು ತಾಲೂಕು ಆಡಳಿತ ರಕ್ಷಣೆ ನೀಡುವಂತೆ ಮನವಿ ಮಾಡಿದರಲ್ಲದೆ, ಇದೇ ಗೋಮಾಳದಲ್ಲಿ ಜಿಪಂ ಸದಸ್ಯರಾದ ವೈ.ಎಚ್. ಹುಚ್ಚಯ್ಯನವರಿಗೂ ಕಲ್ಲುಗಣಿಗಾರಿಕೆ ನಡೆಸಲು ಈ ಹಿಂದೇಯೆ ಗುತ್ತಿಗೆ ನೀಡಲಾಗಿದೆ. ಆದರೆ ನಮ್ಮಂತಹವರು ಅರ್ಜಿ ಸಲ್ಲಿಸಿದರೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದ್ದು ತಾಲೂಕು ಆಡಳಿತ ಈ ಬಗ್ಗೆ ಕೂಡಲೆ ಕ್ರಮ ಕೈಗೊಂಡು ಕಲ್ಲುಗಣಿಗಾರಿಕೆ ನಡೆಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ವಾಗ್ವಾದ: ಪ್ರತಿಭಟನಾಕಾರರು ಈ ಹಿಂದೇಯೆ ಮನವಿ ಸಲ್ಲಿಸಿದ್ದರೂ, ತಹಸೀಲ್ದಾರ್ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಂಭುಲಿಂಗಯ್ಯನವರೊಂದಿಗೆ ನಂಜಪ್ಪ ಭೋವಿ ವಾಗ್ವಾದ ನಡೆಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತಹಸೀಲ್ದಾರ್, ತಾವು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದು,ಈಗ ಅರ್ಜಿ ನೀಡಿದಲ್ಲಿ ಅದನ್ನು ಕೂಲಂಕಶವಾಗಿ ಪರಿಶೀಲಿಸಿ, ನಿಯಮಾನುಸಾರ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಇಷ್ಟಕ್ಕೂ ಸುಮ್ಮನಾಗದ ಪ್ರತಿಭಟನಾಕಾರರು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement