ಅಕ್ಷರ ದಾಸೋಹ ಯೋಜನೆ ಅಸಮರ್ಪಕ
ಪಾವಗಡ: ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆ ಅಸಮರ್ಪಕವಾಗಿದ್ದು ಈ ಕೂಡಲೇ ಯೋಜನೆಯ ಪ್ರಗತಿ ವರದಿ ನೀಡುವಂತೆ ಅಕ್ಷರ ದಾಸೋಹ ಯೋಜನೆ ಸಹಾಯಕ ಅಧಿಕಾರಿಗೆ ತಾಪಂ ಇಒ ತಿಪ್ಪೇಸ್ವಾಮಿ ಅವರು ಸಭೆಯಲ್ಲಿ ತಾಕೀತು ಮಾಡಿದರು.
ತಾಪಂ ಅಧ್ಯಕ್ಷೆ ರಾಧಾ ರಾಜ್‌ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ತಾಪಂ ಸದಸ್ಯರ ಆರೋಪದ ಮೇರೆಗೆ ಅಕ್ಷರ ದಾಸೋಹ ಯೋಜನಾಧಿಕಾರಿ ಲಕ್ಷ್ಮಣ್ ಸಿಂಗ್ ಅವರಿಂದ ಯೋಜನೆಯ ವಿವರ ಪಡೆದು ಎಚ್ಚರಿಸಿದರು.
ತಾ. ಬಹುತೇಕ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಸಮರ್ಪಕವಾಗಿದ್ದು ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಲ್ಲಿ ಯೋಜನಾಧಿಕಾರಿ ವಿಫಲ ಮತ್ತು ಯೋಜನೆಯ ಅನುಷ್ಠಾನದ ಬಗ್ಗೆ ಯೋಜನಾಧಿಕಾರಿ ಲಕ್ಷಣ್ ಸಿಂಗ್ ಅವರಿಗೆ ಆಸಕ್ತಿ ಇಲ್ಲವೆಂದು ತಾಪಂ ಸದಸ್ಯರಾದ ಚನ್ನಮಲ್ಲಯ್ಯ ಹಾಗೂ ಚಂದ್ರಶೇಖರ್ ಇತರೆ ಸದಸ್ಯರು ಅರೋಪಿಸಿದರು. ನಿಖರ ಮಾಹಿತಿ ನೀಡುವಲ್ಲಿ ತಡವರಿಸಿದ ಲಕ್ಷ್ಮಣ್‌ಸಿಂಗ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ ಎಂದಾಗ,ನುಣಿಚಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಆಕ್ಷರ ದಾಸೋಹ ಯೋಜನಾಧಿಕಾರಿಯನ್ನು ತಾಪಂ ಇಒ ತರಾಟೆಗೆ ತೆಗೆದುಕೊಂಡು ಕಂಪ್ಯೂಟರ್ ಆಪರೇಟರ್ ಸೇರಿದಂತೆ ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿ ನಿಯೋಜಿಸಿರುವುದಾಗಿ ತಿಳಿಸಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹಾಗೂ ಯೋಜನೆಯ ಪ್ರಗತಿ ಬಗ್ಗೆ ದಾಖಲೆ ಸಮೇತ ವಿವರ ನೀಡುವಂತೆ ಅವರಿಗೆ ತಾಕೀತು ಮಾಡಿದರು.
ಮಾರಾಟ ಕೇಂದ್ರ: ಕೃಷಿ ಇಲಾಖೆಯ ಪ್ರಗತಿ ಬಗ್ಗೆ ವಿವರಿಸಿದ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ್ ಪ್ರಸಕ್ತ ಸಾಲಿಗೆ ಕೆಒಎಫ್‌ನಿಂದ ರೈತರಿಗೆ ಸಹಾಯ ಧನದಲ್ಲಿ ಶೇಂಗಾ ಬಿತ್ತನೆ ಬೀಜ ಪೂರೈಕೆ ಆಗಿದ್ದು ಪ್ರತಿ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ 3,300 ರು.ಗಳನ್ನು ನಿಗದಿಪಡಿಸಿದ್ದು ರೈತರಿಗೆ ಅನುಕೂಲವಾಗುವಂತೆ ಹೋಬಳಿ ಮತ್ತು ಗ್ರಾಪಂಗಳಲ್ಲಿ ಬಿತ್ತನೆ ಬೀಜದ ಮಾರಾಟ ಕೇಂದ್ರಗಳನ್ನು ತೆರೆದಿರುವುದಾಗಿ ಅವರು ತಿಳಿಸಿದರು.