ಜಾತ್ರಾ ಮಹೋತ್ಸವ ನಡೆಯಲು ಎರಡೂ ಗುಂಪುಗಳ ಒಪ್ಪಿಗೆ
ಕುಣಿಗಲ್: ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಜಾತ್ರಾ ಮಹೋತ್ಸವ ನಡೆಯಲು ತಹಸೀಲ್ದಾರ್ ನ್ಯಾಯಾಲಯದಲ್ಲಿ ಗ್ರಾಮದ ಎರಡೂ ಬಣದವರು ಬಾಂಡ್ ಬರೆದುಕೊಟ್ಟು ಜಾತ್ರಾ ಮಹೋತ್ಸವ ನಡೆಯಲು ಕ್ರಮ ಕೈಗೊಳ್ಳುವಂತೆ ಹುಲಿಯೂರುದುರ್ಗ ಪೊಲೀಸರು, ತಹಸೀಲ್ದಾರ್ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಘಟನೆ ವರದಿಯಾಗಿದೆ.
ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಮೃತೂರು ಹೋಬಳಿ ಪಡುವಗೆರೆ ಗ್ರಾಮದಲ್ಲಿ ಒಟ್ಟು 215 ಮನೆಗಳಿದ್ದು, ಗ್ರಾಮದಲ್ಲಿರುವ ಕೊಲ್ಲಾಪುರದಮ್ಮ ದೇವರ ಜಾತ್ರೆಯ ಮತ್ತು ಪೂಜೆ ಮಾಡುವ ವಿಚಾರದಲ್ಲಿ ಗ್ರಾಮದ ಎರಡು ಗುಂಪಿನವರ ಮಧ್ಯೆ ದ್ವೇಷ ಅಸೂಯೆಯಿಂದ ಗ್ರಾಮದಲ್ಲಿ ಒಂದೇ ದೇವರ ಹೆಸರಿನಲ್ಲಿ ಎರಡು ದೇವಸ್ಥಾನಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ ಎರಡು ಬಣಗಳಾಗಿ ಮೂಲ ದೇವಸ್ಥಾನದಲ್ಲಿ ಒಂದು ಗುಂಪಿನವರು, ಹೊಸದೇವಾಲಯದಲ್ಲಿ ಇನ್ನೊಂದು ಗುಂಪಿನವರು ಪೂಜಾಕಾರ್ಯಗಳನ್ನು ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಜಾತ್ರೆ ಮಾಡುವ ವಿಚಾರವಾಗಿ 2007 ನೇ ಸಾಲಿನಿಂದ ಎರಡು ಗುಂಪಿನವರ ಮಧ್ಯೆ ಜಗಳ, ದೊಂಬಿಗಳಾಗಿ ಎರಡು ಗುಂಪಿನವರ ಮೇಲೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ಇನ್ನೂ ಕೆಲವೊಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. 2009 ನೇ ಸಾಲಿನಲ್ಲಿ ಗ್ರಾಮದಲ್ಲಿ ಜಾತ್ರೆ ನಡೆಯುವ ಸಮಯದಲ್ಲಿ ಎರಡು ಗುಂಪಿನವರ ಮಧ್ಯೆ ಗಲಾಟೆಯಾಗಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ನಿಯಂತ್ರಿಸಲು ತಾಲೂಕು ಆಡಳಿತ
ನಿಷೇಧಾಜ್ಞೆಯನ್ನು ಜಾರಿ ಮಾಡಿ ಗ್ರಾಮದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಉಂಟಾಗಬಹುದಾಗಿದ್ದ ಹಾನಿಯನ್ನು ತಡೆಗಟ್ಟಿತ್ತು.
ಇದೆ ಮಾಹೆಯ 19ರಂದು ಒಂದು ಗುಂಪಿನವರು ಗ್ರಾಮದಲ್ಲಿ 20 ಮತ್ತು 21ರಂದು ಜಾತ್ರೆ ಮಾಡಲು ಮುಂದಾಗಿದ್ದು, ದೇವಾಲಯ ಸಮಿತಿಯವರೊಬ್ಬರು ಮರಣ ಹೊಂದಿದ ನಂತರ ಒಂದು ವಾರದಲ್ಲಿ ಮತ್ತೆ ಜಾತ್ರೆಯನ್ನು ಮಾಡಲು ಮುಂದಾಗಿದ್ದಾರೆ. ಎರಡೂ ಗುಂಪಿನವರು ಎಲ್ಲಾ ರೀತಿಯಲ್ಲಿ ಬಲಾಢ್ಯರಾಗಿದ್ದು
ಒಂದೊಂದು ಗುಂಪು ಒಂದೊಂದು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದು, ಜಾತ್ರೆಗೆ ಮುಂದಾದಲ್ಲಿ ಎರಡು ಗುಂಪಿನಿವರು ಬಡಿದಾಡಿಕೊಂಡು, ರಕ್ತ ಪಾತಗಳಾಗಿ, ಗ್ರಾಮದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹುಲಿಯೂರುದುರ್ಗ ಪೊಲೀಸರು ಮುಂಜಾಗೃತ ಕ್ರಮವಾಗಿ ನಿಯಮಾನುಸಾರ, ಗ್ರಾಮದ ಎರಡೂ ಗುಂಪುಗಳವರನ್ನು ಕರೆಸಿ ಶಾಂತಿಪಾಲನೆಗಾಗಿ ಬಾಂಡ್ ಪಡೆಯುವಂತೆ ಕೋರಿ. ತಹಸೀಲ್ದಾರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.