ವಚನ ಸಾಹಿತ್ಯದಿಂದ ಸಂಸ್ಕೃತಿ ಉಳಿವು
ಹುಳಿಯಾರು: ವಚನ ಸಾಹಿತ್ಯ ಅಧ್ಯಯನ ಮಾಡುವುದರಿಂದ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬಹುದೆಂದು ಬಸವಧರ್ಮ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ತಿಳಿಸಿದರು.
ಯಳನಡು ಗ್ರಾಮದ ಬಸವಯೋಗಿ ಸಿದ್ಧರಾಮೇಶ್ವರ ಸಂಘದ ವತಿಯಿಂದ ಸೋಮವಾರ ನಡೆದ ನೂತನ ಬಸವ ಮಂಟಪ ಹಾಗೂ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸಮಾನತೆ ಸಾರುವ ವಚನ ಸಾಹಿತ್ಯ ಅಧ್ಯಯನ ಮಾಡದೇ ಹೋದಲ್ಲಿ ಸಂಸ್ಕೃತಿ ಹಾಳಾಗುತ್ತದೆ ಎಂದ ಅವರು ವೀರಶೈವ ಎಂಬುದು ಜಾತಿಯಲ್ಲ, ಅದೊಂದು ಧರ್ಮವಾಗಿದೆ. ಜಾತಿ, ವರ್ಣ, ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ ಹಾಗೂ ಕಲ್ಯಾಣ ರಾಜ್ಯ ನಿರ್ಮಾಣದ ಗುರಿ ಧ್ಯೇಯವಾಗಿದ್ದು ಇದಕ್ಕೆ ಮಾನ್ಯತೆ ನೀಡಬೇಕಿದೆ ಎಂದರು.
ಬೆಂಗಳೂರಿನ ಬಸವ ಮಂಟಪದ ಬಸವಕುಮಾರ ಸ್ವಾಮೀಜಿ ವಿಶ್ವಗುರು ಬಸವೇಶ್ವರರ ಅಮೃತಶಿಲಾ ಮೂರ್ತಿಪ್ರತಿಷ್ಠಾಪನೆ ನೆರವೇರಿಸಿದರು. ಯಳನಡು-ಅರಸೀಕೆರೆ ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ, ಬೈಲಹೊಂಗಲ ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವಧರ್ಮ ತತ್ವಪ್ರಚಾರಕ ಸಣ್ಣನಂಜಪ್ಪ, ಮಾಜಿ ತಾಪಂ ಸದಸ್ಯ ವೈ.ಆರ್. ಮಲ್ಲಿಕಾರ್ಜುನಯ್ಯ , ಸಿದ್ದರಾಮೇಶ್ವರ ಸಮುದಾಯ ಭವನದ ಅಧ್ಯಕ್ಷ ಜಿ.ಬಸವರಾಜು, ಕರಿಯಮ್ಮ ದೇಗುಲ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ. ಸೋಮಶೇಖರಯ್ಯ, ಯಳನಡು ಬಸವಯೋಗಿ ಸಿದ್ಧರಾಮೇಶ್ವರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಮಹೇಶ್ ಶಾಸ್ತ್ರಿ, ಸದಸ್ಯರಾದ ಸುದರ್ಶನಾಚಾರ್, ವೈ.ಬಿ.ನಾಗರಾಜು ಇತರರಿದ್ದರು.