ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನರಬಲಿ ವದಂತಿಗೆ ಬೆಚ್ಚಿ ಬಿದ್ದ ಆಡಳಿತ

Mainashree
Updated On : 23 May 2014, 12:05 pm

ಕುಣಿಗಲ್: ನಿಧಿಯ ಆಸೆಗಾಗಿ ನರಬಲಿ ನಡೆದಿದೆ ಎಂದು ಕಿಡಿಗೇಡಿಗಳು ಹಬ್ಬಿಸಿದ ವದಂತಿಗೆ, ತಾಲೂಕು ಅಧಿಕಾರಿಗಳು ಪರದಾಡಿದ ಘಟನೆ ನಡೆದಿದೆ.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಯಲಗಲವಾಡಿ ಗ್ರಾಮದ ಗೋವಿಂದಯ್ಯ ಎಂಬ ರೈತ ಸಾಲಬಾಧೆಗೆ ಸಿಕ್ಕಿ ಬುಧವಾರ ರಾತ್ರಿ ತನ್ನ ತೋಟದಲ್ಲಿನ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ತಡರಾತ್ರಿಯಾದರೂ ತಂದೆ ಮನೆಗೆ ಬಾರದ ಕಾರಣ ಅನುಮಾನಗೊಂಡ ಮೃತನ ಮಗ ಶ್ರೀನಿವಾಸ ಹುಡುಕಲು ತೋಟದ ಬಳಿಬಂದಾಗ ತಂದೆ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
ಆತ್ಮಹತ್ಯೆಗೆ ಶರಣಾದ ರೈತ ಗೋವಿಂದಯ್ಯ(40) ತನ್ನ ಸಾವಿಗೆ ತನ್ನ ಸಂಬಂಧಿಕರಾದ ನಾಗರಾಜ್ (ಕೆಎಸ್‌ಆರ್ಟಿಸಿ) ಅತ್ತಿಗೆ ಇತರರು ಕಾರಣವೆಂದು ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದ. ಮೃತ ಗೋವಿಂದಯ್ಯನ ತಂದೆ ನರಸಿಂಹಯ್ಯ ಪ್ರತ್ಯೇಕವಾಗಿ ವಾಸವಾಗಿದ್ದರು. ನರಸಿಂಹಯ್ಯ ಮತ್ತವರ ಪತ್ನಿಗೆ ಮನೆಯಲ್ಲಿ ನೆಮ್ಮದಿ ಇರದ ಕಾರಣ ಗ್ರಾಮದ ದೇವಾಲಯ ಅರ್ಚಕರನ್ನು ಕೇಳಿದಾಗ ಮನೆಯಲ್ಲಿ ಮೂರು ದಿನ ಪೂಜೆ ಮಾಡುವಂತೆ ಹೇಳಿದ್ದರು. ನರಸಿಂಹಯ್ಯ ತನ್ನ ಮನೆಯ ಸೌಖ್ಯಕ್ಕಾಗಿ ಪೂಜೆ ಮಾಡಿ, ಪೂಜೆಯ ಅಂಗವಾಗಿ ಅನ್ನವನ್ನು ಬಾಳೆಎಲೆಯಲ್ಲಿ ಮನೆ ಹೊರಗಿನ ಕತ್ತಾಳೆಮರದ ಬುಡದಲ್ಲಿ ಇಟ್ಟಿದ್ದ.
ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಗ್ರಾಮದ ಕೆಲವರು ತಹಸೀಲ್ದಾರ್ ಅವರಿಗೆ ಕರೆಮಾಡಿ ನಿಧಿ ಆಸೆಗಾಗಿ ನರಬಲಿ ಕೊಡಲಾಗಿದೆ ಎಂದು ತಿಳಿಸಿದ್ದರಿಂದ, ತಹಸೀಲ್ದಾರ್ ಶಂಭುಲಿಂಗಯ್ಯ, ಪಿಎಸೈ ಗುರುಪ್ರಸಾದ್ ತಡ ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿ, ಗೋವಿಂದಯ್ಯ ನೇಣಿಗೆ ಶರಣಾಗದ್ದನ್ನು ಪರಿಶೀಲಿಸಿ ಹಿಂದಿರುಗಿದ್ದರು.
ಗುರುವಾರ ಬೆಳಗಿನ ಜಾವ ಕೆಲ ಕಿಡಿಗೇಡಿಗಳು ನಿಧಿಯ ಆಸೆಗಾಗಿ ನರಬಲಿ ಕೊಟ್ಟಿದ್ದಾರೆಂದೂ ಅದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ವದಂತಿ ಹರಡಿದರು. ಇದನ್ನು ಖಾಸಗಿ ಸುದ್ದಿ ವಾಹಿನಿಯೂ ಬಿತ್ತರಿಸಿತು. ಇದರಿಂದ ತಹಸೀಲ್ದಾರ್ ಶಂಭುಲಿಂಗಯ್ಯ, ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ ಗುರುವಾರ ಬೆಳಗಿನ ಜಾವವೇ ಗ್ರಾಮಕ್ಕೆ ಭೇಟಿ ನೀಡಿ, ಮೃತಗೋವಿಂದಯ್ಯನ ತಂದೆ ನರಸಿಂಹಯ್ಯನ ಮನೆಬಳಿ ಮಾಡಿರುವ ಪೂಜೆ ಸೇರಿದಂತೆ ವಿವಿಧ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ತಹಸೀಲ್ದಾರ್ ಮಾತನಾಡಿ, ಸಾಲಬಾಧೆಯಿಂದ ರೈತ ನೇಣಿಗೆ ಶರಣಾಗಿದ್ದಾರೆ. ನರಬಲಿ ಕಪೋಲ ಕಲ್ಪಿತ ಎಂದು ತಿರಸ್ಕರಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement