ಗ್ರಾಪಂ ಪುನಾರಚಿಸಲು ಸೂಕ್ತ ಶಿಫಾರಸು ಅಗತ್ಯ
ತುಮಕೂರು: ಮುಂಬರುವ ಗ್ರಾ.ಪಂ. ಚುನಾವಣೆಗೂ ಪೂರ್ವ 5ರಿಂದ 7ಸಾವಿರ ಜನಸಂಖ್ಯೆಗೆ ಒಂದು ಗ್ರಾ.ಪಂ.ಯನ್ನು ರಚಿಸುವ ಅವಕಾಶವಿದ್ದು, 2011 ರ ಜನಸಂಖ್ಯೆ ಆಧಾರದ ಮೇಲೆ ಗ್ರಾ.ಪಂ.ಗಳನ್ನು ಪುನರ್ ರಚಿಸಲು ಸೂಕ್ತ ಶಿಫಾರಸುಗಳ ಅಗತ್ಯವಿದೆ ಎಂದು ಗ್ರಾ.ಪಂ. ಪುನರ್ ವಿಂಗಡಣೆ ಅಧ್ಯಕ್ಷ ಎಸ್.ಜಿ. ನಂಜಯ್ಯಮಠ ತಿಳಿಸಿದರು.
ಅವರಿಂದು ಜಿ.ಪಂ. ಸಭಾಂಗಣದಲ್ಲಿ ಗ್ರಾ.ಪಂ.ಗಳ ಪುನರ್ ವಿಂಗಡಣೆ, ಪರಿಷ್ಕರಣೆ ಮತ್ತು ಕೇಂದ್ರ ಸ್ಥಾನ ಬದಲಾವಣೆ ಕುರಿತಂತೆ ಜನಪ್ರತಿನಿಧಿಗಳು, ಸಾರ್ವಜನಿಕರ ಅಹವಾಲು ಆಲಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ 2011 ರ ಜನಗಣತಿ ಪಟ್ಟಿ ನಮ್ಮ ಮುಂದಿದೆ. 1991 ರಿಂದ 2011 ರವರೆಗೆ ಜನಸಂಖ್ಯೆ ಹೆಚ್ಚಳ ಸೇರಿದಂತೆ ಅನೇಕ ಬೆಳವಣಿಗೆಗಳು ಗ್ರಾಮೀಣ ಪ್ರದೇಶಗಳಲ್ಲಿ ಜರುಗಿವೆ. ಗ್ರಾಮೀಣ ಭಾಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲೇ ಬಗೆಹರಿಸಬೇಕು ಎಂದು ತಿಳಿಸಿದರು. ಹಲವಾರು ಅಭಿವೃದ್ಧಿ ಯೋಜನೆಗಳನ್ನು ಗ್ರಾಮಪಂಚಾಯತಿಗಳಲ್ಲಿ ಸೇರ್ಪಡೆಗೊಳಿಸುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಒಂದು ಸಾವಿರ ಶುದ್ದ ನೀರಿನ ಘಟಕಗಳು ರಾಜ್ಯದಲ್ಲಿವೆ. ಈ ಪೈಕಿ 769 ಕಾರ್ಯಾರಂಭ ಮಾಡಿದ್ದರೆ, ಉಳಿದ ಘಟಕಗಳು ಪ್ರಗತಿ ಹಂತದಲ್ಲಿವೆ ಎಂದು ಅವರು ತಿಳಿಸಿದರು.
ಪ್ರತಿ 5 ಸಾವಿರದಿಂದ 7 ಸಾವಿರ ಜನಸಂಖ್ಯೆಗೆ ಒಂದು ಗ್ರಾಮಪಂಚಾಯತಿ ರಚಿಸಲು ಅವಕಾಶವಿದ್ದು, ವಿಶೇಷ ಸಂದರ್ಭದಲ್ಲಿ 5 ಕಿ.ಮೀ. ತ್ರಿಜ್ಯದ ಅಥವಾ 10 ಕಿ.ಮೀ. ವ್ಯಾಸದ ಅಡಿಯಲ್ಲಿ 2500 ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿದ ಪ್ರದೇಶವನ್ನು ಕೂಡ ಗ್ರಾಮಪಂಚಾಯತಿ ಎಂದು ಘೋಷಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು. ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ, ಪ್ರಸ್ತುತ ಜಿಲ್ಲೆಯಲ್ಲಿ 321 ಗ್ರಾ.ಪಂ.ಗಳಿದ್ದು, 50 ಹೋಬಳಿಗಳಿವೆ. ಈ 50 ಹೋಬಳಿಗಳನ್ನು ಉನ್ನತೀಕರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಹಾಗೂ ತುಮಕೂರು ಪಾಲಿಕೆ ವ್ಯಾಪ್ತಿಗೆ ಬರುವಂತಹ 8 ರಿಂದ 10 ಗ್ರಾ.ಪಂ.ಗಳು ಪಾಲಿಕೆಗೆ ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.