ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜವಾಬ್ದಾರಿ ಅರಿತು ಕೆಲಸ ಮಾಡಿ

Mainashree
Updated On : 23 May 2014, 10:13 am

ಚಿಕ್ಕನಾಯಕನಹಳ್ಳಿ: ಜವಾಬ್ದಾರಿಯರಿತು ಕೆಲಸ ಮಾಡುವುದಾದರೆ ಇಲ್ಲಿರಿ,ಇಲ್ಲದಿದ್ದರೆ ಗಂಟುಮೂಟೆ ಕಟ್ಟಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಪುರಸಭೆ ಸಿಬ್ಬಂದಿ ವಿರುದ್ಧ ಗುಡುಗಿದರು.
ಪಟ್ಟಣದಲ್ಲಿ ತಲೆದೋರಿರುವ  ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕರು ಮೇಲಿನಂತೆ ಹೇಳಿದರಲ್ಲದೆ, ಬೇಜವಾಬ್ದಾರಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
 ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಪುರಸಭೆ ಸಿಬ್ಬಂದಿ ಸಮರ್ಥನೀಯವಲ್ಲದ ನೆಪವೊಡ್ಡಿ  ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇದರಿಂದ ನಾಗರಿಕರು ನಮ್ಮನ್ನು ಶಪಿಸುತ್ತಿದ್ದಾರೆ. ಹೆಚ್ಚು ಕಡಿಮೆ ಹದಿನೈದು ದಿನಗಳಿಗೊಮ್ಮೆ ನೀರು ಬಿಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ರೀತಿ ಆಡಳಿತ ನಡೆಸಲು ಜನ ನಮ್ಮನ್ನು ಆರಿಸಿ ಕಳುಹಿಸಿಲ್ಲ. ಪಟ್ಟಣದಲ್ಲಿ ಕೊಳವೆ ಬಾವಿಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆಯೇ ಹೊರತು, ನೀರಿನ ಲಭ್ಯತೆ ಮಾತ್ರ ಹೆಚ್ಚಾಗಿಲ್ಲ. ಇದಕ್ಕೆ  ಸಬೂಬು ಹೇಳುವುದನ್ನು ಬಿಟ್ಟು ವೈಜ್ಞಾನಿಕ ಕಾರಣ ನೀಡುವಂತೆ ಅವರು ತಾಕೀತು ಮಾಡಿದರು.
ವಾರಕ್ಕೊಮ್ಮೆಯಾದರೂ: ಹಿರಿಯ ಸದಸ್ಯ ಸಿ.ಎಂ.ರಂಗಸ್ವಾಮಿ ಮಾತನಾಡಿ  ಹೆಚ್ಚಿಗೆ ಆದಾಯ ಬರುವುದಾದರೆ ನಮ್ಮ ಪುರಸಭೆಯಲ್ಲಿ ತ್ವರಿತವಾಗಿ ಕೆಲಸಗಳಾಗುತ್ತವೆ. ಪುರಸಭೆಯ ಆರೋಗ್ಯಾಧಿಕಾರಿಗಳು ಬದುಕಿರುವವರಿಗೇ ಮರಣ ಸಮರ್ಥನ ಪತ್ರ ನೀಡಿದ್ದಾರೆ ಎಂದರು. ಮತ್ತೋರ್ವ ಸದಸ್ಯ ಎಚ್.ಬಿ.ಪ್ರಕಾಶ್ ಮಾತನಾಡುತ್ತಾ ಪಟ್ಟಣದಲ್ಲಿ ನಮಗೆ ಬಂದಿರುವ ಮಾಹಿತಿಯ ಪ್ರಕಾರ ಮುಖ್ಯಸರಬರಾಜು (ರೈಸಿಂಗ್‌ಮೈನ್) ಮಾರ್ಗದಿಂದ 150ಕ್ಕೂ ಹೆಚ್ಚು ಅಕ್ರಮ ನಲ್ಲಿ ಸಂಪರ್ಕಗಳಿರುವುದಾಗಿ ತಿಳಿದು ಬಂದಿದೆ.  ಅವುಗಳನ್ನು ಕಡಿತಗೊಳಿಸಿದರೆ, ಈಗಿರುವ ನೀರಿನ ಲಭ್ಯತೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರು ನೀರು ಬಿಡಬಹುದು. ರೈಸಿಂಗ್‌ಮೈನ್ ಹಗರಣಕ್ಕೆ 10 ಸಾವಿರದವರೆಗೂ ಲಂಚಪಡೆಯುತ್ತಿರುವ ಎಂಜಿನಿಯರ್‌ಗಳೇ ಕಾರಣ ಎಂದರು.  ಇಂತಹ ಅವ್ಯವಹಾರಕ್ಕೆ ಮೊದಲು ಕಡಿವಾಣ ಹಾಕಿ ಎಂದರು.
ನೀರು ಬಿಟ್ಟಿಲ್ಲ: ಮತ್ತೋರ್ವ ಸದಸ್ಯ ಸಿ.ಎಸ್.ರಮೇಶ್‌ಮಾತನಾಡಿ ಕಳೆದ 13 ದಿನಗಳಿಂದ ಕೆಲ ಬಡಾವಣೆಗಳಲ್ಲಿ ನೀರು ಬಿಟ್ಟಿಲ್ಲ.ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡ ಟ್ಯಾಂಕರ್ ಮಾಲೀಕರುಗಳು ಜನರ ಸುಲಿಗೆ ಮಾಡುತ್ತಿದ್ದಾರೆ ಎಂದರು.  
ಕೇಳುವವರೇ ಇಲ್ಲ: ಪುರಸಭೆಯ ಸಿಬ್ಬಂದಿಯನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಬೇಕಾಬಿಟ್ಟಿಯಾಗಿ ಕೆಲಸಕ್ಕೆ ಹಾಜರಾಗುತ್ತಾರೆ.ಇವರನ್ನು ಯಾರು ಪ್ರಶ್ನಿಸುವಂತಿಲ್ಲ. ಸದಸ್ಯರುಗಳೆಂದರೆ ಇವರಿಗೆ ಲೆಕ್ಕಕ್ಕಿಲ್ಲದಂತಾಗಿದೆ . ಬಹುತೇಕ ಸಿಬ್ಬಂದಿ ಯಾವಾಗ ಬಂದರು ಕಚೇರಿಯಲ್ಲಿ ಇರುವುದಿಲ್ಲ. ಆದರೆ  ಹಾಜರಾತಿ ಪುಸ್ತಕದಲ್ಲಿ ಮಾತ್ರ ಸಹಿಯಿರುತ್ತದೆ ಎಂದು ಸದಸ್ಯ ಸಿ.ಪಿ.ಮಹೇಶ್ ದೂರಿದರು.
ಕೊನೆಯಲ್ಲಿ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶಶೆಟ್ಟಿ ಸಮಸ್ಯೆಗಳನ್ನು ಬಗೆಹರಿಸಲು 15 ದಿನಗಳ ಗಡುವನ್ನು ನೀಡಲಾಗುವುದು. ನಾನೂ ಸೇರಿದಂತೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಮತ್ತು ಸದಸ್ಯರನ್ನು ಒಳಗೊಂಡ ತಂಡ ಪ್ರತಿವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ಪರಿಶೀಲಿಸಲಿದ್ದೇವೆ. ಸಿಬ್ಬಂದಿ ವಿರುದ್ಧ ದೂರು ಬಂದರೆ ಕಠಿಣ ಕ್ರಮಕೈಗೊಳ್ಳ ಬೇಕಾಗುತ್ತದೆಂದು ಸಿಬ್ಬಂದಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement