ದಲಿತರ ನಿವೇಶನ ಕಬಳಿಕೆ ಆರೋಪ; ಗ್ರಾಪಂಗೆ ಮುತ್ತಿಗೆ
ಪಾವಗಡ: ದಲಿತರ ನಿವೇಶನಗಳಿಗೆ ಮೀಸಲಿದ್ದ ಜಮೀನನ್ನು ಕಬಳಿಸಿ ವಂಚಿಸಿದ್ದಾರೆಂದು ಆರೋಪಿಸಿ ತಾ.ವಿವಿಧ ದಲಿತ ಸಂಘಟನೆಗಳ ವತಿಯಿಂದ ಮಂಗಳವಾಡ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ತಾ.ಜೀವಿಕ ಸಂಘಟನೆಯ ಅಧ್ಯಕ್ಷ ಟಿ. ಹನುಮಂತರಾಯಪ್ಪ ಮಾತನಾಡಿ ಮಂಗಳವಾಡ ಗ್ರಾಮದ 141, 6ರಲ್ಲಿ ದಲಿತರ ನಿವೇಶನಗಳಿಗೆ ಮೀಸಲಿಟ್ಟಿದ್ದ ಅರ್ಧ ಎಕರೆ ಜಮೀನನ್ನು ಗ್ರಾಮದ ಕೆಲ ಸವರ್ಣೀಯ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು. ಅಲ್ಲದೇ ದಲಿತರ ನಿವೇಶನಗಳಿಗೆ ಮೀಸಲಿದ್ದ ಸದರಿ ಜಮೀನಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸುಮಾರು 5ಲಕ್ಷ ರು.ಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದು ಕೂಡಲೇ ತೆರವುಗೊಳಿ ಮನೆಗಳಿಲ್ಲದ ದಲಿತರಿಗೆ ನಿವೇಶನ ಕಲ್ಪಿಸುವಂತೆ ಅವರು ಒತ್ತಾಯಿಸಿದರು.
1960ರಲ್ಲಿ ಸರ್ಕಾರ ಸದರಿ ಸರ್ವೆ ನಂಬರಿನ ಜಮೀನಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಗ್ರಾಮದ ಕೆಲ ದಲಿತರಿಗೆ ನಿವೇಶನಗಳನ್ನು ಕಲ್ಪಿಸಿ ಮಂಡಲ್ ಪಂಚಾಯಿತಿಯಿಂದ ಹಕ್ಕು ಪತ್ರಗಳು ಪಡೆದಿದ್ದಾರೆ. ನಿವೇಶನಕ್ಕೆ ಸಂಬಂಧಿಸಿದ ಹಕ್ಕು ಪತ್ರಗಳನ್ನು ಪಡೆದ ದಲಿತರು ಆಗಿನ ಕಾಲದಲ್ಲಿ ಹಣಕಾಸಿನ ತೊಂದರೆಯಿಂದ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಚೈತನ್ಯವಿಲ್ಲದೇ ಗ್ರಾಮದ ರಸ್ತೆ ಬದಿಯ ಗುಡಿಸಲುಗಳಲ್ಲಿ ವಾಸವಾಗಿದ್ದರು. ಖಾಲಿ ಇರುವ ನಿವೇಶನಗಳ ಮೇಲೆ ಕಣ್ಣು ಇಟ್ಟ ಗ್ರಾಮದ ಕೆಲ ಸವರ್ಣೀಯರು ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ನಿವೇಶನಗಳ ಪಕ್ಕ ಖಾಲಿ ಇರುವ ಜಮೀನು ಕೂಡ ಒತ್ತುವರಿ ಮಾಡಿಕೊಂಡ ಕಾರಣ ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಭವನ ನಿರ್ಮಾಣಕ್ಕೆ ತೀವ್ರ ತೊಂದರೆ ಆಗಿದೆ ಎಂದು ಆರೋಪಿಸಿದರು.
ಕಳಪೆ ರಸ್ತೆ: ಜಿಪಂನಿಂದ ದಲಿತ ಕಾಲೋನಿಯಲ್ಲಿ ನಿರ್ಮಿಸಿದ್ದ ಲಕ್ಷಾಂತರ ರು.ಗಳ ಸಿಸಿ ರಸ್ತೆ ಕಳಪೆಯಿಂದ ಕೊಡಿದ್ದು ಇದರ ಗುತ್ತಿಗೆದಾರ ಕಾಮಗಾರಿಯ ಹೆಸರಿನಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಕಿಡಿಕಾರಿದ ಅವರು ಸಮಯಕ್ಕೆ ಸರಿಯಾಗಿ ಗ್ರಾಪಂ ನೌಕರರಿಗೆ ವೇತನ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ದಲಿತರಿಗೆ ನಿವೇಶನ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆಲ್ತಾಫ್ ಪಾಷ ಅವರು ಗ್ರಾಮದ ದಲಿತ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದಾಖಲಾತಿಯ ಪ್ರಕಾರ ಕ್ರಮ ಜರುಗಿಸಿ ಅನ್ಯಾಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಕಲ್ಪಿಸುವ ಭರವಸೆ ನೀಡಿದರು.
ಅರಸೀಕೆರೆ ಪೊಲೀಸ್ ಠಾಣೆ ಪಿಎಸ್ಐ ಕೃಷ್ಣಮೂರ್ತಿ, ಕಂದಾಯ ಸರ್ವೆ ಅಧಿಕಾರಿ ರಮೇಶ್, ಗ್ರಾಪಂ ಪಿಡಿಒ ತಿಪ್ಪೇಸ್ವಾಮಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
ಬಿ.ತಿಪ್ಪಣ್ಣ, ಎಚ್.ಮಲ್ಲೇಶ್, ಹನುಮಂತರಾಯಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಮಂದಿ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಇದ್ದರು.