ಪ್ರತ್ಯೇಕ ಮತದಾನದ ಹಕ್ಕಿನ ಬೇಡಿಕೆ ಕೈ ಬಿಟ್ಟಿದ್ದೇ ತಪ್ಪಾಯ್ತು
ಕ.ಪ್ರ.ವಾರ್ತೆ, ತುಮಕೂರು, ಮೇ 24
ದಲಿತ ರಾಜಕೀಯ ನೇತಾರರು ಮೇಲ್ವರ್ಗದ ಮರ್ಜಿಗೆ ಒಳಗಾಗಲು ಮುಖ್ಯ ಕಾರಣ ಪ್ರತ್ಯೇಕ ಮತದಾನ ಹಕ್ಕು ಬೇಡಿಕೆ ಕೈ ಬಿಟ್ಟಿದ್ದೇ ಕಾರಣ ಎಂದು ದಲಿತ ಕವಿ ಡಾ. ಸಿದ್ದಲಿಂಗಯ್ಯ ವಿಷಾದಿಸಿದರು.
ಅವರು ತುಮಕೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 123 ರ ಹಾಗೂ ಡಾ.ಬಾಬು ಜಗಜೀವನ್‌ರಾಂ ಅವರ 107 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯ ಮಾತಿಗೆ ಬೆಲೆಕೊಟ್ಟು ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ಬೇಡಿಕೆ ಕೈಬಿಟ್ಟ ಪರಿಣಾಮ ದಲಿತರು ಮೇಲ್ವರ್ಗದ ಮರ್ಜಿಗೆ ಒಳಪಡಬೇಕಾದ ಸ್ಥಿತಿ ಬಂದೊದಗಿದೆ ಎಂದರು.
ಪ್ರತ್ಯೇಕ ಮತದಾನದ ಹಕ್ಕನ್ನು ಬದಿಗಿಟ್ಟ ಪರಿಣಾಮ ಇಂದು ದಲಿತರು ಮೀಸಲು ಕ್ಷೇತ್ರದಲ್ಲಿ ಜಯಗಳಿಸಲು ಮೇಲ್ವರ್ಗದ ಮುಖಂಡರನ್ನು ಒಲೈಸುವಂತಹ ದುಃಸ್ಥಿತಿಗೆ ಒಳಗಾಗಬೇಕಾಗಿದೆ ಎಂದರು. ಅಂಬೇಡ್ಕರ್ ಅವರ ಮುಂದೆ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ಮತ್ತು ಗಾಂಧೀಜಿಯವರ ಪ್ರಾಣ ಇವುಗಳಲ್ಲಿ ಯಾವುದು ಆಯ್ಕೆ ಎಂಬ ಪ್ರಶ್ನೆ ಬಂದಾಗ ದೇಶಕೋಸ್ಕರ ದಲಿತರ ಹಕ್ಕನ್ನೇ ಬಿಟ್ಟುಕೊಟ್ಟರು.
ಈ ಸತ್ಯವನ್ನೇ ಅರ್ಥ ಮಾಡಿಕೊಂಡ ಗಾಂಧೀಜಿ ಈ ಘಟನೆಯ ನಂತರ ದಲಿತರ ಕೇರಿಗಳನ್ನು ಶುಚಿ ಮಾಡುವ ಸಾಮಾಜಿಕ ಸೇವೆ ಮಾಡಿದರೆ, ಗಾಂಧೀಜಿಯ ಈ ಸೇವೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದರು.
ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರು ದಲಿತರ ಎರಡು ಧೀಮಂತ ಚೇತನಗಳು. ಇಂದು ದೇಶ, ವಿದೇಶಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅಧ್ಯಯನಗಳು ನಡೆಯುತ್ತಿರುವುದು ಪ್ರಪಂಚ ಅವರನ್ನು ಅರ್ಥ ಮಾಡಿಕೊಳ್ಳುತ್ತಿರುವುದೇ ಆಗಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದರು.
ಹಿಂದೂವಾಗಿ ಸಾಯಲ್ಲ: ಹಿಂದೂ ಧರ್ಮದಲ್ಲಿ ಅಸಮಾನತೆಗಳನ್ನು ಕಂಡು ಬೇಸತ್ತಿದ್ದ ಅಂಬೇಡ್ಕರ್ 1935 ರಲ್ಲಿಯೇ ನಾನು ಹಿಂದೂವಾಗಿ ಹುಟ್ಟಿದ್ದು ಹಿಂದೂವಾಗಿ ಸಾಯಲ್ಲ ಎಂದು ಹೇಳಿದ್ದರೂ ಅಲ್ಲಿಂದ 1955ರ ವರೆಗೆ ಕಾಯ್ದರು ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಬದಲಾಗದ ಕಾರಣ ಅಂತಿಮವಾಗಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದರು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ರಾಜು ಮಾತನಾಡಿ, ಸಾವಿರಾರು ವರ್ಷಗಳ ಶೋಷಣೆಯಿಂದ ದಲಿತ ಸಮುದಾಯವನ್ನು ಹೊರತರುವ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಹೆಚ್ಚಿನ ಒತ್ತು ನೀಡಿದ್ದರು. ಅಸ್ಪೃಷ್ಯತೆಯನ್ನು ಕಾನೂನಿನ ಮೂಲಕ ಒಡೆದು ಓಡಿಸಬಹುದು ಎಂಬ ನಂಬಿಕೆ ಅವರದ್ದಾಗಿತ್ತು. ಆದರೆ ಅದು ಇಂದಿಗೂ ಸಾಧ್ಯವಾಗದಿರುವುದು ಈ ದೇಶದ ದುರಂತ ಎಂದರು.
ಅಧ್ಯಕ್ಷತೆಯನ್ನು ತುಮಕೂರು ವಿವಿಯ ಕುಲಪತಿ ಡಾ.ಎ.ಎಚ್. ರಾಜಾಸಾಬ್ ವಹಿಸಿದ್ದರು. ವಿವಿಯ ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಹಂಪಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಸಾಮಾಜಿಕ ಪರಿವರ್ತನಾ ತಂಡದಿಂದ ಸಾಮಾಜಿಕ ಚಳವಳಿ ಮೆಟ್ಟಿಲು ಎಂಬ ಶೀರ್ಷಿಕೆಯಡಿ ಗೀತ ಗಾಯನ ಏರ್ಪಡಿಸಲಾಗಿತ್ತು.