ಸಂಸದನಾಗಿ ನಿಷ್ಕ್ರಿಯನಾಗಲಾರೆ
ಕ.ಪ್ರ. ವಾರ್ತೆ ತುಮಕೂರು ಮೇ 26
ತಾವು ಸಂಸದನಾಗಿ ನಿಷ್ಕ್ರಿಯನಾಗಲಾರೆ ಎಂದು ನೂತನ ಸಂಸದ ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಅಂಬೇಡ್ಕರ್ ಯುವ ಸೇನೆ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 123 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತುಮಕೂರು ಜಿಲ್ಲೆಯ ಸಮಸ್ಯೆಗಳನ್ನು ಅರಿತಿದ್ದೇನೆ. ಎಲ್ಲಾ ಸ್ತರದ ಜನರ ವಿಶ್ವಾಸ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆ ನೀಡಿದರು.
ಅಂಬೇಡ್ಕರ್ ಅವರು ಸಂವಿಧಾನ ರಚನೆಗೂ ಮುನ್ನ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನ ಹೇಗಿರುತ್ತದೆ ಎಂಬುದನ್ನು ಸ್ವತಃ ತಾವೇ ಅನುಭವಿಸಿ, ಅರ್ಥ ಮಾಡಿಕೊಂಡು, ಅಂತಹ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಂಬೇಡ್ಕರ್ ಪಾತ್ರ ಅಪಾರ. ಹಾಗಾಗಿ ಪ್ರತಿಯೊಬ್ಬರೂ ಅಂಬೇಡ್ಕರ್ ಆಶಯಗಳಿಗೆ ತಕ್ಕಂತೆ ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದರು.
ಭರವಸೆ: ಜಿಲ್ಲೆಯ ಜನತೆ ಬದಲಾವಣೆ ಬಯಸುವ ಮೂಲಕ ತಮಗೆ ಅಧಿಕಾರ ನೀಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಜವಾಬ್ದಾರಿಯುತವಾಗಿ ಪ್ರಾಮಾಣಿಕ ಸೇವೆ ಮಾಡಲು ತಾವು ಶಕ್ತಿ ಮೀರಿ ಪ್ರಯತ್ನಿಸಲಿದ್ದು, ರಾಜ್ಯ ಹಾಗೂ ಕೇಂದ್ರದ ಯೋಜನೆಗಳನ್ನು ಜಿಲ್ಲೆಗೂ ತರುವಲ್ಲಿ ಪ್ರಾಮಾಣಿಕ ಸೇವೆ ಮಾಡುವುದಾಗಿ ಅವರು ಭರವಸೆ ನೀಡಿದರು.
ತಮ್ಮನ್ನು ನಂಬಿ ಅಧಿಕಾರಕ್ಕೆ ತಂದ ಜಿಲ್ಲೆಯ ಜನರ ಕಲ್ಯಾಣಕ್ಕಾಗಿ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದ ಅವರು ಕೇಂದ್ರದಲ್ಲಿ ಜಿಲ್ಲೆಯ ಧ್ವನಿಯಾಗಿ ಮಾತನಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಈ ಬಾರಿ ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರಿಂದ ಅಂಬೇಡ್ಕರ್ ದಿನಾಚರಣೆಯನ್ನು ಸರಳ ರೀತಿಯಲ್ಲಿ ನಡೆಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಪಾಲನೆ ಮಾಡಬೇಕಿದೆ. ಎಲ್ಲ ಜಾತಿ, ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ನೋಡಬೇಕೆಂಬ ಅಂಬೇಡ್ಕರ್ ಕನಸು ಇಂದಿನ ಈ ಸಭೆಯಲ್ಲಿ ಈಡೇರಿದಂತಾಗಿದೆ ಎಂದರು.
ಶಿಕ್ಷಣಕ್ಕೆ ಒತ್ತು: ಸಮಾಜದ ಯಾವುದೇ ಸಮುದಾಯ ಮುಂದೆ ಬರಬೇಕಾದರೆ ಶಿಕ್ಷಣ ಅತಿಮುಖ್ಯ ಎಂಬುದನ್ನು ಅಂದಿನ ದಿನಗಳಲ್ಲಿಯೇ ಮನಗಂಡ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಎಸ್ಸಿಎಸ್ಟಿ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣದಲ್ಲಿ ಕೆಲವೊಂದು ರೀತಿ-ನೀತಿಗಳನ್ನು ಜಾರಿಗೆ ತರುವ ಮೂಲಕ ದಲಿತರೂ ಉತ್ತಮ ಶಿಕ್ಷಣ ಪಡೆಯುವಂತಾಗಲು ಸತತ ಪರಿಶ್ರಮವಹಿಸಿದರು.
ಸಂಘಟನೆ ಮುಖ್ಯ: ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ, ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ, ಸಂಘಟನೆ ಅತಿಮುಖ್ಯ ಎಂದು ಮನಗಂಡಿದ್ದ ಅವರು, ಸಂಘಟಿತರಾಗಿ ಹೋರಾಟಗಳನ್ನು ನಡೆಸಿದಾಗ ಮಾತ್ರ ಹೋರಾಟಗಳಿಗೆ ಹೆಚ್ಚಿನ ಮೌಲ್ಯ ಲಭಿಸುತ್ತದೆ ಎಂಬುದನ್ನು ಮೊದಲೇ ಅಂಬೇಡ್ಕರ್ ಅರಿತಿದ್ದರು.
ಯಾವುದೇ ಜಾತಿಗೆ ಸೀಮಿತರಲ್ಲ: ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ದಲಿತ ಕವಿ ಕೆ.ಬಿ.ಸಿದ್ದಯ್ಯ ಅವರು ಮಾತನಾಡಿ, ಅಂಬೇಡ್ಕರ್ ಯಾವುದೇ ಜಾತಿ, ಮತ-ಧರ್ಮಕ್ಕೆ ಸೀಮಿತವಾಗಿದ್ದವರಲ್ಲ. ಆದರೆ ಅಂಬೇಡ್ಕರ್ ಹೆಸರು ಹಾಗೂ ಶಕ್ತಿಯನ್ನು ದಲಿತರಾಗಲಿ, ದಲಿತೇತರರಾಗಲಿ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ಮಹಾನಗರ ಪಾಲಿಕೆ ಮೇಯರ್ ಗೀತಾರುದ್ರೇಶ್ ಮಾತನಾಡಿ, ಪಾಲಿಕೆ ವತಿಯಿಂದ ಎಸ್ಸಿ, ಎಸ್ಟಿ ಜನಾಂಗಕ್ಕೆ ನೀಡಬೇಕಾದಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ಎಚ್. ಕೋದಂಡರಾಮ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೆಡಿಎಸ್ ಮುಖಂಡ ನರಸೇಗೌಡರು, ಜೆಡಿಎಸ್ ಹಿರಿಯ ಉಪಾಧ್ಯಕ್ಷ ಬೋರೇಗೌಡ, ಅಂಬೇಡ್ಕರ್ ಯುವಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ನಾಗಯ್ಯ, ಅಂಬೇಡ್ಕರ್ ಯುವಸೇನೆ ರಾಜ್ಯ ಕಾರ್ಯದರ್ಶಿ ವೈ.ಎಚ್. ಶ್ರೀನಿವಾಸ್, ಗಂಗಹನುಮಯ್ಯ, ಪಾಲಿಕೆ ಸದಸ್ಯರಾದ ಡೆಲ್ಟಾರವಿ, ಸುಧೀಶ್ವರ್, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಜಿ.ಗಣೇಶ್, ನರಸಿಂಹಮೂರ್ತಿ, ಸೈಯದ್ ಅಫ್ತರ್, ಜಯಣ್ಣ, ರವೀಂದ್ರನಾಥ್, ಉದ್ಯಮಿ ಮುರುಳಿಧರ್ ಹಾಲಪ್ಪ, ಭಾನುಪ್ರಕಾಶ್, ಆಂಜಿನಪ್ಪ, ಜಗದೀಶ್, ನಾಗಭೂಷಣ್ ಮತ್ತಿತರರು ಹಾಜರಿದ್ದರು. ಸೋಮಶೇಖರ್ ಸ್ವಾಗತಿಸಿದರೆ, ಗೋವಿಂದರಾಜು ಕ್ರಾಂತಿಗೀತೆ ಹಾಡಿದರು. ಜಯಣ್ಣ ನಿರೂಪಿಸಿದರು.
ಜಿಲ್ಲೆಯ ಜನತೆ ಬದಲಾವಣೆ ಬಯಸುವ ಮೂಲಕ ತಮಗೆ ಅಧಿಕಾರ ನೀಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಜವಾಬ್ದಾರಿಯುತವಾಗಿ ಪ್ರಾಮಾಣಿಕ ಸೇವೆ ಮಾಡಲು ತಾವು ಶಕ್ತಿ ಮೀರಿ ಪ್ರಯತ್ನಿಸಲಿದ್ದು, ರಾಜ್ಯ ಹಾಗೂ ಕೇಂದ್ರದ ಯೋಜನೆಗಳನ್ನು ಜಿಲ್ಲೆಗೂ ತರುವಲ್ಲಿ ಪ್ರಾಮಾಣಿಕ ಸೇವೆ ಮಾಡುವೆ.
ಟಿ ಮುದ್ದಹನುಮೇಗೌಡ, ಸಂಸದ