ಹಳಿಯಾಳ: ಪ್ಯಾರಿ ಶುಗರ್ಸ್ ಕಂಪನಿಯವರು ಸ್ಥಳೀಯರ ಕಬ್ಬನ್ನು ಪಡೆದು ನಂತರ ಬೇರೆ ಜಿಲ್ಲೆಯ ಕಬ್ಬು ಪಡೆಯುವಂತೆ ಮಾಜಿ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಸಲಹೆ ನೀಡಿದ್ದಾರೆ.
ಅವರು ಪಟ್ಟಣದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಳಿಯಾಳ ಕ್ಷೇತ್ರದ ರೈತರು ಬೆಳೆದ ಕಬ್ಬಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಆಗ್ರಹಿಸಿದ ಅವರು, ಈ ಕುರಿತು ಈಗಾಗಲೇ ಲಿಖಿತವಾಗಿ ಪ್ಯಾರಿ ಕಂಪನಿಯ ಆಡಳಿತ ಮಂಡಳಿಯ ಗಮನ ಸೆಳೆಯಲಾಗಿದೆ. ಶೇ. 40ಕ್ಕಿಂತಲೂ ಅಧಿಕ ಕ್ಷೇತ್ರದ ಕಬ್ಬು ಬೇರೆ ಕಾರ್ಖಾನೆಗೆ ಸಾಗಿಸಿರುವುದು ದುರದೃಷ್ಟಕರ. ಬೇರೆ ಜಿಲ್ಲೆಯ ಕಬ್ಬು ಪಡೆದು ನುರಿಸಲು ಪ್ಯಾರಿ ಕಂಪನಿಯವರು ಮುಂದಾಗಿರುವ ಕ್ರಮವನ್ನು ಖಂಡಿಸಿದ ಅವರು, ಇದು ಮುಂದುವರಿದರೆ ತಾವು ಹೋರಾಟ ಮಾಡುವುದಾಗಿ ತಿಳಿಸಿದರು. ಪ್ರಸ್ತುತ ಸರ್ಕಾರ ಮೂರು ತುಂಡುಗಳಾಗಿದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಕ್ಷಣ ರಾಜಿನಾಮೆ ನೀಡಿ ವಿಧಾನಸಭೆಯನ್ನು ವಿಸರ್ಜಿಸಬೇಕು. ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಬಜೆಟ್ ಮಂಡಿಸಲು ಮುಂದಾಗಿದ್ದು ಇದು ಕೇವಲ ಬಿಜೆಪಿಯ ಪ್ರಣಾಳಿಕೆಯಾಗುತ್ತದೆ, ಮುಂದೆ ಬರುವ ಸರ್ಕಾರ ಬಜೆಟ್ ಅನುಷ್ಠಾನಗೊಳಿಸಬೇಕಾಗುತ್ತದೆ ಎಂದು ದೇಶಪಾಂಡೆ ಆರೋಪಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋವರ್ಕರ ಹಾಜರಿದ್ದರು.